ರಸ್ತೆ ಅಪಘಾತ: ಗೋಲ್ಡನ್ ಬೇಕರಿ ಮಾಲಕ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಅಝೀಝ್ ಮೃತ್ಯು

Prasthutha|

ಪುತ್ತೂರು: ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ಗೋಲ್ಡನ್ ಬೇಕರಿಯಾ ಮಾಲೀಕ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಅಝೀಝ್ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

- Advertisement -

ಅವರಿಗೆ 38 ವರ್ಷ ವಯಸ್ಸಾಗಿತ್ತು. ಅವರು ಇಂದು ಬೆಳಗ್ಗೆ ಬಲ್ನಾಡುವಿನಲ್ಲಿರುವ ತಮ್ಮ ಮನೆಯಿಂದ ಬೇಕರಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬಳಿ ವೇಗವಾಗಿ ಬಂದ ಗೊಬ್ಬರದ ಲಾರಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.
ಮಧ್ಯಾಹ್ನ ಬಲ್ನಾಡ್ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜನಾನುರಾಗಿಯಾಗಿದ್ದ ಅಬ್ದುಲ್ ಅಝೀಝ್ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಕಾರ್ಯಕರ್ತರಾಗಿದ್ದ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಾಲ್ಕು ದಿನಗಳ ಬಳಿಕ ದುಬೈಗೆ ಹೋಗಲು ನಿರ್ಧರಿಸಿದ್ದ ಅವರು ಅಕಾಲಿಕವಾಗಿ ಮೃತಪಟ್ಟಿದ್ದು, ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ಪತ್ನಿ, ಇಬ್ಬರು ಮಕ್ಕಳು, ತಂದೆ, ತಾಯಿ, ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ.ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

- Advertisement -


ಸಂತಾಪ

ಸಕ್ರಿಯ ಕಾರ್ಯಕರ್ತರಾದ ಅಬ್ದುಲ್ ಅಝೀಝ್ ಬಲ್ನಾಡ್ ರಸ್ತೆ ಅಪಘಾತದಲ್ಲಿ ಮರಣ ಹೊಂದಿರುವುದಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಸಾಮಾಜಿಕ, ಧಾರ್ಮಿಕ ಸೇವೆಗಳಲ್ಲಿ ಮತ್ತು ನ್ಯಾಯ ಪರವಾದ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಇವರ ಅಗಲುವಿಕೆಯು ಸಮುದಾಯಕ್ಕೆ ಮತ್ತು ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ಅಲ್ಲಾಹನು ಅವರಿಗೆ ಮಗ್ಫಿರತ್ ನೀಡಲಿ. ಮೃತರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹನು ನಮಗೆಲ್ಲರಿಗೂ ನೀಡಲಿ. ಪಕ್ಷದ ಎಲ್ಲಾ ಕಾರ್ಯಕರ್ತರು ಮಯ್ಯತ್ ಸಂದರ್ಶಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಎಸ್ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಮನವಿ ಮಾಡಿದ್ದಾರೆ.

ಅಬ್ದುಲ್ ಅಝೀಝ್ ಬಲ್ನಾಡ್ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಪುತ್ತೂರು ಘಟಕ ತೀವ್ರ ಸಂತಾಪ ಸೂಚಿಸುತ್ತದೆ ಎಂದು ಪಿಎಫ್ ಐ ಪುತ್ತೂರು ಅಧ್ಯಕ್ಷ ಜಾಬಿರ್ ಅರಿಯಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp