ದುಬೈ; ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 14ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬಿದ್ದಿದ್ದು, ಪ್ಲೇ ಆಫ್ ಪ್ರವೇಶಿಸಿರುವ ನಾಲ್ಕು ತಂಡಗಳ ಸ್ಪಷ್ಟ ಚಿತ್ರಣ ಸಿಕ್ಕಿದೆ. ಡೆಲ್ಲಿ ಕ್ಯಾಪಿಟಲ್ಸ್ , ಚೆನ್ನೈ ಸೂಪರ್ ಕಿಂಗ್ಸ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದೆ.
ಡೆಲ್ಲಿ, ಚೆನ್ನೈ ಹಾಗೂ ಬೆಂಗಳೂರು ತಂಡಗಳು ಪ್ಲೇ ಆಫ್ ಹಂತವನ್ನು ಪ್ರವೇಶಿಸಿದ್ದರೂ ಸಹ, ನಾಲ್ಕನೆಯ ತಂಡವಾಗಿ ಯಾರು ಎಂಟ್ರಿಯಾಗಲಿದ್ದಾರೆ ಎಂಬ ಕುತೂಹಲ ಅಂತಿಮ ಲೀಗ್ ಪಂದ್ಯದವರೆಗೂ ಮುಂದುವರೆದಿತ್ತು. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆಯಲು ತೀವ್ರ ಪೈಪೋಟಿ ನಡೆಸಿದ್ದವು.
ತಲಾ 14 ಪಂದ್ಯಗಳಲ್ಲಿ ಉಭಯ ತಂಡಗಳು 7 ಗೆಲುವು ಹಾಗೂ 7 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದವು. ಆದರೆ ಮುಂಬೈ ಇಂಡಿಯನ್ಸ್’ [+0.116] ನೆಟ್ ರನ್ ರೇಟ್’ಗಿಂತಲೂ ಹೆಚ್ಚು ರನ್ ರೇಟ್ ಹೊಂದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ [ +0.587] ಪ್ಲೇ ಆಫ್ ಹಂತಕ್ಕೆ ಎಂಟ್ರಿ ಪಡೆದಿದೆ.
ಲೀಗ್ ಪಂದ್ಯಗಳಿಗೆ ತೆರೆ- ಕ್ವಾಲಿಫಯರ್ ಕುತೂಹಲ
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್’ನ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬಿದ್ದ ಬಳಿಕ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ತಂಡಗಳ ಮಧ್ಯೆ ಕ್ವಾಲಿಫಯರ್-1 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ವಿಜೇತರಾಗುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡವು ಕ್ವಾಲಿಫಯರ್-2 ಪಂದ್ಯದಲ್ಲಿ ಎಲಿಮಿನೇಟರ್ ಪಂದ್ಯದ ವಿಜೇತರನ್ನು ಎದುರಿಸಬೇಕಾಗಿದೆ.
ಅಂಕಪಟ್ಟಿಯಲ್ಲಿ ಮೂರು ಹಾಗೂ ನಾಲ್ಕು ಸ್ಥಾನಗಳಲ್ಲಿ ಇರುವ ತಂಡಗಳ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು ಗೆದ್ದ ತಂಡ ಕ್ವಾಲಿಫಯರ್-1 ರಲ್ಲಿ ಸೋತ ತಂಡದ ಜೊತೆ ಕ್ವಾಲಿಫಯರ್-2 ಪಂದ್ಯವನ್ನಾಡಲಿದೆ. ಸೋಲುವ ತಂಡ ಟೂರ್ನಿಯಿಂದ ಹೊರನಡೆಯಲಿದೆ.
ಕ್ವಾಲಿಫಯರ್-1
ಅಕ್ಟೋಬರ್ 10ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ ನಡೆಯುವ ಕ್ವಾಲಿಫಯರ್-1 ಪಂದ್ಯದ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ದ್ವಿತೀಯ ಸ್ಥಾನದಲ್ಲಿರುವ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ವಿಜೇತ ತಂಡ ನೇರವಾಗಿ ಫೈನಲ್’ಗೆ ಎಂಟ್ರಿ ಪಡೆಯಲಿದೆ.
ಎಲಿಮಿನೇಟರ್
ಅಕ್ಟೋಬರ್ 11ರಂದು ಶಾರ್ಜಾ ಕ್ರೀಡಾಂಗಣದಲ್ಲಿ ಸಂಜೆ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಆರ್’ಸಿಬಿ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದ್ದು ಸೋತ ತಂಡ ಟೂರ್ನಿಯಿಂದ ಹೊರನಡೆಯಲಿದೆ.
ಕ್ವಾಲಿಫಯರ್-2
ಮಹತ್ವದ ಕ್ವಾಲಿಫೈಯರ್- 2 ಪಂದ್ಯ ಅಕ್ಟೋಬರ್ 13ರಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಸೋತ ತಂಡವು ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ಫೈನಲ್ ಪಂದ್ಯ:
ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ “ಟೈಟಲ್ ಫೈಟ್ ಫೈನಲ್ ಪಂದ್ಯ” ಅಕ್ಟೋಬರ್ 15, ಶುಕ್ರವಾರ ಸಂಜೆ 7.30ಕ್ಕೆ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.