ಚಂಡೀಗಡ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಬಿಜೆಪಿ ಸಂಸದ ನಯಾಬ್ ಸೈನಿ ಅವರ ಬೆಂಗಾವಲು ವಾಹನ ಹರಿದ ಪರಿಣಾಮ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹರ್ಯಾಣದ ರೈತರು ದೂರಿದ್ದಾರೆ.
ಗಾಯಗೊಂಡ ರೈತನನ್ನು ತಕ್ಷಣ ಅಂಬಾಲ ಸಮೀಪದ ನರೈಂಗರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯ ಪಕ್ಕದಲ್ಲಿ ನಿಂತಿದ್ದ ಪ್ರತಿಭಟನಾ ನಿರತ ರೈತನಿಗೆ ಸಂಸದರ ಬೆಂಗಾವಲು ವಾಹನ ಡಿಕ್ಕಿಯಾದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲು ರೈತರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಮಾತ್ರವಲ್ಲ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದರೆ ಠಾಣೆಗೆ ಘೇರಾವ್ ಹಾಕುವುದಾಗಿ ರೈತರು ತಿಳಿಸಿದ್ದಾರೆ.
ಕುರುಕ್ಷೇತ್ರ ಸಂಸದ ನಯಾಬ್ ಸೈನಿ ಮತ್ತು ಹರ್ಯಾಣದ ಗಣಿ ಸಚಿವ ಮೂಲ್ ಚಂದ್ ಶರ್ಮಾ ಸೇರಿದಂತೆ ಇತರ ಪಕ್ಷದ ನಾಯಕರು ನರೈಂಗರ್ ಎಂಬಲ್ಲಿನ ಸೈನಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉತ್ತರಪ್ರದೇಶದ ಲಖಿಂಪುರ ಖೇರಿ ಘಟನೆಯ ನಾಲ್ಕು ದಿನದ ನಂತರ ಈ ದುರ್ಘಟನೆ ನಡೆದಿರು ಮತ್ತಷ್ಟು ಆತಂಕ ಸೃಷ್ಟಿಸಿದೆ.