ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆಗೆ ಧಾವಿಸುವವರಿಗೆ ಐದು ಸಾವಿರ ಬಹುಮಾನ ಘೋಷಣೆ

Prasthutha|

ನವದೆಹಲಿ: ರಸ್ತೆ ಅಪಘಾತಗಳಾದಾಗ ನಿಂತು ನೋಡುವವರು, ಮೊಬೈಲ್’ ನಲ್ಲಿ ಚಿತ್ರೀಕರಿಸುವವರೇ ಹೆಚ್ಚು. ಇದರ ಬದಲಾಗಿ ಗಾಯಾಳುಗಳ ರಕ್ಷಣೆಗೆ ಧಾವಿಸಲು ಉತ್ತೇಜಿಸುವುದಕ್ಕಾಗಿ, ಅಪಘಾತದಲ್ಲಿ ಗಂಭೀರ ಗಾಯಗೊಂಡವರ ಪ್ರಾಣ ರಕ್ಷಣೆಗೆ ಮುಂದಾಗುವ ನಾಗರಿಕರಿಗೆ ಕೇಂದ್ರ ಸರಕಾರ 5 ಸಾವಿರ ರೂ.ನಗದು ಬಹುಮಾನ ಹಾಗೂ ಅಭಿನಂದನೆಯ ಪ್ರಮಾಣಪತ್ರ ನೀಡುವುದಾಗಿ ಘೋಷಿಸಿದೆ.

- Advertisement -


ರಸ್ತೆ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡವವರನ್ನು “ಗೋಲ್ಡನ್ ಹವರ್” ಅಂದರೆ ಒಂದು ಗಂಟೆಯ ಒಳಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಲು ನೆರವಾಗುವವರನ್ನು ಗೌರವಿಸಲು ಕೇಂದ್ರ ಸರ್ಕಾರ ‘ಉತ್ತಮ ದಯಾಳು’ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ಗಂಭೀರ ಅಪಘಾತಗಳಾದಾಗ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಪ್ರಾಣ ರಕ್ಷಣೆಗೆ ಮುಂದಾಗುವವರಿಗೆ 5 ಸಾವಿರ ನಗದು ಬಹುಮಾನ ಘೋಷಿಸಲಾಗಿದೆ.


ಈ ಯೋಜನೆಯು ಅಕ್ಟೋಬರ್ 15, 2021ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 2026ರವರೆಗೆ ಜಾರಿಯಲ್ಲಿರಲಿದೆ. ಇದಕ್ಕಾಗಿ ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊಸದಾಗಿ ಪೋರ್ಟಲ್ ಒಂದನ್ನು ಆರಂಭಿಸಲಿದೆ. ಈ ಪೋರ್ಟಲ್’ ನಲ್ಲಿ ಗಾಯಳುಗಳನ್ನು ರಕ್ಷಿಸಿದವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಅಪಘಾತದ ವಿವರಗಳೆಲ್ಲವನ್ನೂ ನಮೂದಿಸಲಾಗುತ್ತದೆ. ವಿವರಗಳನ್ನು ಜಿಲ್ಲಾಡಳಿತ ಹಾಗೂ ಸ್ಥಳೀಯ ಪೊಲೀಸ್ ಠಾಣೆ ಅಥವಾ ಆಸ್ಪತ್ರೆಯ ಅಧಿಕೃತರು ನಮೂದಿಸಲಿದ್ದಾರೆ.

- Advertisement -


‘ಉತ್ತಮ ದಯಾಳು’ಯೋಜನೆಯಡಿ ಪ್ರಾಣ ರಕ್ಷಿಸಿದವರ ಪಟ್ಟಿಯನ್ನು ವರ್ಷದ ಕೊನೆಯಲ್ಲಿ ಇಲಾಖೆಯು ಮತ್ತೊಮ್ಮೆ ಪರಿಶೀಲಿಸಲಿದ್ದು, ಈ ವೇಳೆ ಹೆಚ್ಚು ಜೀವ ಉಳಿಸಿದ ಹತ್ತು ಮಂದಿಯನ್ನು ಆಯ್ಕೆಮಾಡಿ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ಜೀವರಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ಒಂದು ಲಕ್ಷ ರುಪಾಯಿ ನಗದು ಬಹುಮಾನವನ್ನು ಒಳಗೊಂಡಿರಲಿದೆ.
ಅಪಘಾತದಲ್ಲಿ ಓರ್ವ ವ್ಯಕ್ತಿಯ ಜೀವ ಉಳಿಸಿದರೆ ಐದು ಸಾವಿರ ನಗದು ಬಹುಮಾನ ಘೋಷಣೆ ಮಾಡಲಾಗಿದ್ದು, ಒಂದಕ್ಕಿಂತ ಹೆಚ್ಚು ಮಂದಿಯ ಜೀವ ಉಳಿಸಿದರೆ ತಲಾ ಐದು ಸಾವಿರ ಬಹುಮಾನ ನೀಡಲಾಗುವುದು ಎಂದು ಸಚಿವಾಲಯ ಹೇಳಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಲಾ ಐದು ಲಕ್ಷ ರೂಪಾಯಿಗಳನ್ನು ಬಿಡುಗಡೆಮಾಡಲಾಗಿದೆ.

Join Whatsapp