ಡೆಹ್ರಾಡೂನ್: ಅಪರಿಚಿತ ಬಲಪಂಥೀಯರ ಗುಂಪೊಂದು ಸ್ಥಳೀಯ ಚರ್ಚ್ ನ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಡೆದಿದೆ.
ಅಕ್ಟೋಬರ್ 3 ರಂದು ವಿಶ್ವಹಿಂದೂ ಪರಿಷತ್ ಮತ್ತು ಬಲಪಂಥೀಯರಿಗೆ ಸೇರಿದ ಮಹಿಳೆಯರು ಸೇರಿದಂತೆ ಸುಮಾರು 200ಕ್ಕಿಂತಲೂ ಅಧಿಕ ಮಂದಿಯ ಅಪರಿಚಿತ ಗುಂಪೊಂದು ರೂರ್ಕಿಯಲ್ಲಿನ ಚರ್ಚ್ ಅನ್ನು ಧ್ವಂಸಗೊಳಿಸಿದೆ.
ವಿಎಚ್ ಪಿ ಕಾರ್ಯಕರ್ತರ ದಾಳಿಯಿಂದಾಗಿ ಬೆಳಿಗ್ಗೆ ಪ್ರಾರ್ಥನೆಗಾಗಿ ಸೇರಿದ್ದ ಭಕ್ತರು ಗಾಯಗೊಂಡರು.
ಸ್ಥಳೀಯ ವಿಶ್ವಹಿಂದೂ ಪರಿಷತ್ (ವಿ.ಎಚ್.ಪಿ), ಬಜರಂಗದಳ ಮತ್ತು ಬಿಜೆಪಿ ಯುವ ಮೋರ್ಚಾಕ್ಕೆ ಸೇರಿದ ಸುಮಾರು 200 ದುಷ್ಕರ್ಮಿಗಳು ಚರ್ಚ್ ಗೆ ನುಗ್ಗಿ ಧ್ವಂಸ ಮಾಡಲು ಆರಂಭಿಸಿದರು ಎಂದು ಚರ್ಚ್ ನ ಪಾದ್ರಿಯ ಪತ್ನಿ ಸಧಾನ ಲಾನ್ಸೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆಳೆಗ್ಗೆ ಪ್ರಾರ್ಥನೆಗೆ ಜನರು ಸೇರಿದ ಸಂದರ್ಭದಲ್ಲಿ ವಂದೇ ಮಾತರಂ, ಜೈ ಶ್ರೀರಾಂ ಘೋಷಣೆಗಳನ್ನು ಕೂಗುತ್ತಾ ಚರ್ಚ್ ನ ಒಳಗೆ ಪ್ರವೇಶಿಸಿದ ದುಷ್ಕರ್ಮಿಗಳ ತಂಡ, ಅಲ್ಲಿದ್ದ ಕುರ್ಚಿ, ಮೇಜು, ಸಂಗೀತ ಉಪಕರಣ ಮತ್ತು ಇತರೆ ವಸ್ತುಗಳನ್ನು ನಾಶಪಡಿಸಿದೆ. ಮಾತ್ರವಲ್ಲ ಉದ್ರಿಕ್ತ ಗುಂಪು ಅಲ್ಲಿದ್ದ ಸ್ವಯಂ ಸೇವಕರನ್ನು ಮತ್ತು ಮಹಿಳೆಯರನ್ನು ಹೊಡೆಯಲಾರಂಭಿಸಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆಕ್ಷನ್ 295, 296, 395, 323, 504, 506 ಮತ್ತು 427 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡು ತನಿಖೆ ಮುಂದುವರಿಸಿದ್ದಾರೆ.