ದೆಹಲಿ ಗಲಭೆ | ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ ವರದಿ | ಸುದ್ದಿ ಮೂಲ ತಿಳಿಸಲು ‘ಜೀ ನ್ಯೂಸ್’ಗೆ ಹೈಕೋರ್ಟ್ ಆದೇಶ

Prasthutha|

ನವದೆಹಲಿ : ದೆಹಲಿ ಗಲಭೆಗೆ ಸಂಬಂಧಿಸಿ ಬಂಧಿತನಾದ ಆರೋಪಿ ಆಸಿಫ್ ಇಕ್ಬಾಲ್ ತನ್ಹಾ ಅವರ ತಪ್ಪೊಪ್ಪಿಗೆ ಹೇಳಿಕೆಯ ಮೂಲ ಯಾವುದು ಎಂಬುದನ್ನು ಸ್ಪಷ್ಟವಾಗಿ ತಿಳಿಸುವಂತೆ ‘ಜೀ ನ್ಯೂಸ್’ ಟಿವಿ ವಾಹಿನಿಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಮುಂದಿನ ವಿಚಾರಣೆ ಅ.19ರೊಳಗೆ ಈ ಮಾಹಿತಿ ಒದಗಿಸುವಂತೆ ನ್ಯಾ. ವಿಭು ಬಖ್ರು ನ್ಯಾಯಪೀಠ ಈ ತೀರ್ಪು ನೀಡಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.

- Advertisement -

ಆಸಿಫ್ ಇಕ್ಬಾಲ್ ತನ್ಹಾ ಅವರ ಅರ್ಜಿಗೆ ಸಂಬಂಧಿಸಿ ದೆಹಲಿ ಡಿಸಿಪಿ ವಿಶೇಷ ಘಟಕ ಕೋರ್ಟ್ ಗೆ ಸಲ್ಲಿಸಿರುವ ಮಾಹಿತಿಯ ಆಧಾರದಲ್ಲಿ ಕೋರ್ಟ್ ಈ ನಿರ್ದೇಶನ ನೀಡಿದೆ. ತನಿಖಾ ವಿವರಗಳು ತಮ್ಮ ಕಚೇರಿಯ ಯಾವುದೇ ವ್ಯಕ್ತಿಯಿಂದ ಸೋರಿಕೆಯಾಗಿಲ್ಲ ಎಂದು ಡಿಸಿಪಿ ವಿಶೇಷ ಘಟಕ ಕೋರ್ಟ್ ಗೆ ತಿಳಿಸಿದೆ.

24ರ ಹರೆಯದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ, ಕಳೆದ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಗೆ ಸಂಬಂಧಿಸಿ ಬಂಧಿತನಾಗಿದ್ದಾನೆ. ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಮೀರನ್ ಹೈದರ್ ಮತ್ತು ಸಫೂರ ಅವರೊಂದಿಗೆ ಈತ ಆಪ್ತನಾಗಿದ್ದ ಮತ್ತು ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂದು ಆಪಾದಿಸಲಾಗಿದೆ.

- Advertisement -

ದೆಹಲಿ ಗಲಭೆ ಸಂಘಟಿಸಿದ ಮತ್ತು ಕೋಮು ಗಲಭೆಗೆ ಉದ್ರಿಕ್ತಗೊಳಿಸಿದ್ದ ಬಗ್ಗೆ ತಾನು ತಪ್ಪೊಪ್ಪಿಗೆ ನೀಡಿದ್ದೇನೆ ಎಂದು ವಿವಿಧ ಎಲೆಕ್ಟ್ರಾನಿಕ್ ಮಾಧ್ಯಮಗಳು ವರದಿ ಮಾಡಿರುವುದು ತನಗೆ ನೋವನ್ನುಂಟು ಮಾಡಿದೆ ಎಂದು ಆಸಿಫ್ ತಮ್ಮ ಅರ್ಜಿಯಲ್ಲಿ ಹೇಳಿದ್ದರು. ಇದು ಪ್ರಕರಣ ನ್ಯಾಯಯುತ ವಿಚಾರಣೆಗೆ ಅಡ್ಡಿಯುಂಟು ಮಾಡುತ್ತದೆ ಎಂದು ಅವರು ತಿಳಿಸಿದ್ದರು.   



Join Whatsapp