ಬೆಂಗಳೂರು: ವಿಶ್ವ ಹೃದಯ ದಿನಾಚರಣೆ ಮುನ್ನಾ ದಿನ ನಗರದ ಸಪ್ತಗಿರಿ ಆಸ್ಪತ್ರೆಯಲ್ಲಿ ಹೃದಯದ ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೃದಯದ ಕಾರ್ಯನಿರ್ವಹಣೆ ಕುರಿತು ಅರಿವು ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ 52 ವರ್ಷದ ವ್ಯಕ್ತಿಗೆ ಹರಿದು ಹಾನಿಗೊಳಗಾದ ಹೃದಯದ ದೊಡ್ಡ ರಕ್ತನಾಳಕ್ಕೆ ಸಪ್ತಗಿರಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಅತ್ಯಂತ ವಿರಳವಾದ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ.
ಈ ಬಾರಿ ವಿಶ್ವ ಹೃದಯ ದಿನದ ಆರೋಗ್ಯ ರಕ್ಷಣೆಗೆ “ ಜಾಗತಿಕ ಮಟ್ಟದಲ್ಲಿ ಸಿವಿಡಿಯ ಜಾಗೃತಿ, ತಡೆಗಟ್ಟುವಿಕೆ ಮತ್ತು ನಿರ್ವಹಣೆಯನ್ನು ಸುಧಾರಿಸಲು ಡಿಜಿಟಲ್ ಆರೋಗ್ಯ ಶಕ್ತಿ ಬಳಸಿಕೊಳ್ಳುವ ಗುರಿ ಹೊಂದಲಾಗಿದೆ.
ವಿಶ್ವ ಹೃದಯದ ದಿನದ ಹಿನ್ನೆಲೆಯಲ್ಲಿ ಹೃದಯದ ಮಾದರಿಯನ್ನು ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿ ಜನ ಜಾಗೃತಿ ಮೂಡಿಸಲಾಗುತ್ತಿದೆ. ಹೃದಯ ಹೇಗೆ ಕಾರ್ಯನಿರ್ವಹಿಸುತ್ತದೆ. ಹೃದಯದ ಆರೋಗ್ಯ ರಕ್ಷಣೆ ವಿಧಾನಗಳು ಮತ್ತಿತರ ವಿಷಯಗಳ ಕುರಿತು ತಜ್ಞ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಹೃದಯ ಶಸ್ತ್ರ ಚಿಕಿತ್ಸ ಡಾ ತಮೀಮ್ ಅಹ್ಮದ್ ಮತ್ತು ವೈದ್ಯರ ತಂಡದಿಂದ ,1 ವರ್ಷ 2ತಿಂಗಳು ಮಗುವಿನ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ್ದಾರೆ ಹಾಗೂ 52 ವರ್ಷದ ವ್ಯಕ್ತಿಯ ಹೃದಯದ ದೊಡ್ಡ ರಕ್ತನಾಳ ಅಂದರೆ ಮಹಾಪಧಮನಿಯ ಛೇದನವಾಗಿದ್ದು, ರಕ್ತ ನಾಳ ಹರಿದು ಅತ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿತ್ತು. ಈತ ಆಸ್ಪತ್ರೆಗೆ ಬಂದಾಗ ಗಂಭೀರ ಸ್ಥಿತಿಯಲ್ಲಿದ್ದ. ಕೂಡಲೇ ಜೀವ ರಕ್ಷಕ ಸಾಧನಗಳೊಂದಿಗೆ ಅತ್ಯಂತ ವಿರಳ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ರೋಗಿ ಇದೀಗ ಚೇತರಿಸಿಕೊಂಡಿದ್ದಾರೆ ಎಂದರು.
ಸಪ್ತಗಿರಿ ಆಸ್ಪತ್ರೆಯ ಪ್ರಾಂಶುಪಾಲರಾದ ಮತ್ತು ಮುಖ್ಯ ವೈದ್ಯಾಧಿಕಾರಿಯಾದ ಡಾ .ಜಯಂತಿ ಹೃದಯದ ಆರೋಗ್ಯ ಅತ್ಯಂತ ಮುಖ್ಯವಾಗಿದೆ. 30 ವಯೋಮಿತಿ ಮೀರಿದ ನಂತರ ಪ್ರತಿವರ್ಷ ಹೃದಯದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ರೀತಿಯ ಹೃದಯದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರವಿದೆ. ಹೃದಯದ ನಿರ್ಲಕ್ಷ್ಯತೆ ಸಲ್ಲದು. ಹೃದಯದ ರಕ್ಷಣೆಗೆ ಡಿಜಿಟಲ್ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಪ್ತಗಿರಿ ಆಸ್ಪತ್ರೆಯ ನಿರ್ದೇಶಕ ಮನೋಜ್, ಹೃದಯ ತಜ್ಞರಾದ ಡಾ. ಸುರೇಶ್ ಕುಮಾರ್, ಡಾ. ವಾಸು ಬಾಬು, ಡಾ.ಪ್ರದೀಪ್ ಕುಮಾರ್, ಅನಸ್ತೇಷಿಯ ತಜ್ಞ ಡಾ. ಅಮಿತ್ ಲಾಲ್ ಮತ್ತಿತರರು ಉಪಸ್ಥಿತರಿದ್ದರು.