ಪಾಟ್ನಾ: ಬಿಹಾರದ ಗಯಾ ಜಿಲ್ಲೆಯಲ್ಲಿ 14 ವರ್ಷದ ದಲಿತ ಕ್ರಿಶ್ಚಿಯನ್ ಬಾಲಕ ಮೇಲೆ ಆಸಿಡ್ ಎರಚಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಮಧ್ಯೆ ಕುಟುಂಬ ಕಲಹದಿಂದ ಬಾಲಕ ನಿತೀಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆರೋಪವನ್ನು ನಿರಾಕರಿಸಿರುವ ಆತನ ಕುಟುಂಬದ ಮೂಲಗಳು ಮೋಟಾರ್ ಬೈಕಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಆಸಿಡ್ ಎರಚಿದೆ ಎಂದು ಆರೋಪಿಸಿದೆ.
ರಿಕ್ಷಾ ಚಾಲಕರಾಗಿದ್ದ ಬಾಲಕನ ತಂದೆ ವಕೀಲ ರವಿದಾಸ್ ಐದು ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಸ್ಥಳೀಯ ಹಿಂದುತ್ವ ಸಂಘಟನೆಗಳೊಂದಿಗೆ ಸೇರಿಕೊಂಡು ಚರ್ಚ್ ಗೆ ತೆರಳದಂತೆ ಬೆದರಿಕೆ ಹಾಕುತ್ತಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದರು ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ತೆರಳಿದ್ದ ನಿತೀಶ್ ನ ಮೇಲೆ ಆಸಿಡ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆತ ಕಿರುಚುತ್ತಾ ಮನೆಗೆ ಧಾವಿಸಿದ ಎಂದು ಆತನ ಸಹೋದರ ಸಂಜೀತ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಪಾಟ್ನಾದ ಅಪೊಲೊ ಬರ್ಸ್ರಂ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸಿಡ್ ದಾಳಿಯಿಂದಾಗಿ ಬಾಲಕನ ದೇಹದ 70 % ಭಾಗಗಳು ಸುಟ್ಟು ಹೋಗಿದೆ ಎಂದು ವೈದ್ಯರಾದ ಡಾ. ಕಾಮೋದ್ ನಾರಾಯಣ್ ತಿವಾರಿ ಕುಟುಂಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಸಕ್ತ ದಲಿತ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.