ಉಪ್ಪಿನಂಗಡಿ ಕಾಣೆಯಾದ ವ್ಯಕ್ತಿಗೆ ಭಯೋತ್ಪಾದಕ ಪಟ್ಟ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತೀವ್ರ ಖಂಡನೆ

Prasthutha|

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಕ್ಕಿಲಾಡಿ ನಿವಾಸಿ ರಫೀಕ್ ಎಂಬವರು ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದು ಸ್ಥಳೀಯ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು ಪೊಲೀಸರು ಪತ್ತೆ ಹಚ್ಚುವ ಭರವಸೆ ನೀಡಿದ್ದರು. ಈ ಹಂತದಲ್ಲಿ ಇಲ್ಲಿನ ಕೆಲವೊಂದು ಸಂಘೀ ಪ್ರೇರಿತ ಪತ್ರಿಕೆಗಳು ಆತನಿಗೆ ಉಗ್ರಗಾಮಿಗಳ ಜೊತೆ ನಿಕಟ ಸಂಪರ್ಕವಿದೆಯೆಂದು ನಾನಾ ರೀತಿಯ ಕಪೋಲಕಲ್ಪಿತ ವರದಿ ಮಾಡಿ ಭಯೋತ್ಪಾದಕ ಪಟ್ಟಕಟ್ಟಿ ಸಮಾಜದ ಸ್ವಾಸ್ಥ್ಯವನ್ನು ಕೆಡವಲು ಪೈಪೋಟಿ ನೀಡಿದ್ದು, ಇಂತಹ ಮಾಧ್ಯಮಗಳು ಒಂದು ನಿರ್ದಿಷ್ಟ ಸಮುದಾಯವನ್ನು ಭಯೋತ್ಪಾದಕರನ್ನಾಗಿ ಮಾಡಲು ಹೊರಟಿರುವುದು ಖಂಡನೀಯ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ತಿಳಿಸಿದೆ.

- Advertisement -


ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷ ಹಮೀದ್ ಮೆಜೆಸ್ಟಿಕ್ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಾಪತ್ತೆಯಾದ ವ್ಯಕ್ತಿ ಪತ್ತೆಯಾಗಿದ್ದು ಯಾವುದೇ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಖುದ್ದು ಮಂಗಳೂರು ಕಮೀಷನರ್ ಮಾಧ್ಯಮ ಹೇಳಿಕೆ ನೀಡಿದ್ದಾರೆ. ಪೊಲೀಸ್ ತನಿಖೆಯಾಗುವ ಮುನ್ನ ಕನ್ನಡಪ್ರಭ, ಹೊಸದಿಗಂತ ದಂತಹ ಕೆಲ ಅಂಧ ಪತ್ರಿಕೆಗಳು ನೀಡುವ ಭಯೋತ್ಪಾದನಾ ವರದಿಗಳು ಆತನ ಕುಟುಂಬ ಮತ್ತು ಇಡೀ ಸಮುದಾಯವನ್ನು ಸಂಶಯದ ದೃಷ್ಟಿಯಿಂದ ನೋಡುವಂತೆ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.


ಈ ಹಿಂದೆ ಇದೇ ರೀತಿ ಗೇರುಕಟ್ಟೆಯ ಮೂಲದ ಅಮಾಯಕ ಧರ್ಮಗುರುಗಳ ಮೇಲೆ ಉಗ್ರಪಟ್ಟ ಕಟ್ಟಲು ಹೋಗಿ ಇಂತಹ ಪತ್ರಿಕೆಗಳು ಮಾನ ಕಳೆದುಕೊಂಡಿತ್ತು, ಈಗ ಮತ್ತೆ ಅದೇ ರೀತಿಯ ಪ್ರಯತ್ನ ಉಪ್ಪಿನಂಗಡಿ ಮೂಲದ ವ್ಯಕ್ತಿಯ ಮೇಲೆ ಹಾಕುವ ಪ್ರಯತ್ನ ಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ಶೀಘ್ರ ತನಿಖೆಯಿಂದ ನೈಜತೆ ತಿಳಿದುಬಂದಿದೆ. ಇಲ್ಲಿನ ಪೊಲೀಸ್ ಇಲಾಖೆ ಇಂತಹ ಸುಳ್ಳುವರದಿಗಳನ್ನು ಸೃಷ್ಟಿಸಿ ಇಲ್ಲಿನ ಮುಸ್ಲಿಮರನ್ನು ಭಯೋತ್ಪಾದಕರನ್ನಾಗಿ ಬಿಂಬಿಸಿ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕದಡುವಂತಹ ನೀಚ ಪತ್ರಿಕೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.

- Advertisement -


ಇಂತಹ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಪ್ರಜ್ಞಾವಂತ ನಾಗರಿಕರನ್ನು ಒಟ್ಟುಗೂಡಿಸಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಹಮೀದ್ ಮೆಜೆಸ್ಟಿಕ್ ಎಚ್ಚರಿಕೆಯನ್ನು ನೀಡಿದರು.



Join Whatsapp