ಬೆಂಗಳೂರು : ಕಳೆದ ವಾರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಕಳೆದ ಸೋಮವಾರ ಸಾವಯವ ರಾಸಾಯನಿಕ ವಿಭಾಗದಲ್ಲಿ ಪಿಎಚ್.ಡಿ. ಮಾಡುತ್ತಿದ್ದ ಕೊಲ್ಕತ್ತದ ರಾಜಶ್ರೀ ಭಟ್ಟಾಚಾರ್ಯ ಅವರ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾದರು. ಅದರ ಮರುದಿನ ಮಂಗಳವಾರ 21ರ ರಾಜಸ್ತಾನ ಮೂಲದ ರಿಷಬ್ ಮಿಸ್ರಾಮ್ ಅವರ ಕೋಣೆಯಲ್ಲಿ ನೇಣಿಗೆ ಕೊರಳೊಡ್ಡಿರುವುದು ಕಂಡು ಬಂತು. ರಿಷಬ್ ರ ತಂದೆ ನೀಡಿದ ಹೇಳಿಕೆಯಂತೆ ಬಿಎಸ್ಸಿ ಸಂಶೋಧನೆ ನಡೆಸಿದ್ದ ಆತ ಖಿನ್ನತೆಗೆ ಒಳಗಾಗಿದ್ದು, ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇದೇ ವರುಷ ಮಾರ್ಚ್ 2ರಂದು ನ್ಯಾನೋ ತಂತ್ರಜ್ಞಾನದಲ್ಲಿ ಪಿಹೆಚ್.ಡಿ. ಮಾಡುತ್ತಿದ್ದ ಬಿಹಾರ ಮೂಲದ 34ರ ರಣಧೀರ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆಗಸ್ಟ್ ನಲ್ಲಿ ಮತ್ತೊಬ್ಬ ಪಿಹೆಚ್.ಡಿ. ವಿದ್ಯಾರ್ಥಿ ಅಜಯ್ ಶ್ರೀಚಂದ್ರ ತನ್ನ ಕೋಣೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದರು. “ಕ್ಷಮಿಸಿ ಅಪ್ಪ, ಈ ಲೋಕ ನನಗಲ್ಲ, ಇದನ್ನು ಪಡೆಯುವುದು ನನಗೆ ತುಂಬ ಕಷ್ಟದ್ದಾಗಿದೆ” ಎಂದು ಅಜಯ್ ಮರಣ ಪತ್ರ ಬರೆದಿಟ್ಟಿದ್ದ. ನಾಲ್ವರೂ ಆತ್ಮಹತ್ಯೆ ಮಾಡಿಕೊಂಡರು. ಆಗಸ್ಟ್ 2020ಕ್ಕೆ ಹೋದರೆ ಸಂಖ್ಯೆ ಐದಾಗುತ್ತದೆ. ರಣಧೀರ್ ಕುಮಾರನ ಶವ ದೊರೆತ ದಿನ ಎಂ.ಟೆಕ್. ವಿದ್ಯಾರ್ಥಿ ರಾಹುಲ್ ಪ್ರತಾಪ್ ಸಿಂಗ್ ಕಾಲ್ಚೆಂಡು ಆಡುವಾಗ ಕುಸಿದು ಬಿದ್ದ. ಆಸ್ಪತ್ರೆಗೆ ಒಯ್ದರೆ, ಅದಾಗಲೇ ಸಾವಾಗಿದೆ ಎಂದರು. ಕೂಡಲೆ ಪ್ರಥಮ ಚಿಕಿತ್ಸೆ ಸಿಗಲಿಲ್ಲ ಎಂಬುದು ಸಹಪಾಠಿಗಳ ದೂರು.
ವಿದ್ಯಾರ್ಥಿಗಳ ಪ್ರಕಾರ ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಸಂಸ್ಥೆಯು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದತ್ತ ಗಮನ ಕೊಡಲಿಲ್ಲ. ಇಂಥ ಸಮಸ್ಯೆ ಗಮನಿಸಲು ವೆಲ್ ನೆಸ್ ಕೇಂದ್ರವೊಂದನ್ನು ತೆರೆದಿರುವುದಾಗಿ ಐಐಎಸ್ಸಿ ಹೇಳಿದೆ. “ಸಾಂಕ್ರಾಮಿಕವು ನಮ್ಮ ವಿದ್ಯಾರ್ಥಿಗಳಿಗೆ ತುಂಬ ಕಠಿಣವಾಗಿತ್ತು. ನಾವೀಗ ಸರಿಯಾದ ಸಮಯದಲ್ಲಿ ಅದನ್ನು ಗಮನಿಸಲು ಸಜ್ಜಾಗಿದ್ದೇವೆ” ಎಂಬ ಮಾತನ್ನೂ ಸಂಸ್ಥೆ ಹೇಳಿದೆ. 2021ರ ಏಪ್ರಿಲ್ ನಲ್ಲಿ ಒಂದು ಆರೋಗ್ಯ ಸರ್ವೆ ನಡೆಸಲಾಯಿತು. ಆದರೆ 10 ಶೇಕಡಾ ವಿದ್ಯಾರ್ಥಿಗಳು ಮಾತ್ರ ಸ್ಪಂದಿಸಿದರು. ಆದ್ದರಿಂದ ಮುಂದೆ ಆರೋಗ್ಯ ಸರ್ವೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಮಾಡುತ್ತೇವೆ” ಎಂದು ಸಂಸ್ಥೆ ತಿಳಿಸಿದೆ.
ಅನಗತ್ಯದ ಒತ್ತಡದಲ್ಲಿ ಐಐಎಸ್ಸಿ ವಿದ್ಯಾರ್ಥಿಗಳು
ಐಐಎಸ್ಸಿ ಸಂಸ್ಥೆಯು ಅನಗತ್ಯವಾಗಿ ವಿದ್ಯಾರ್ಥಿಗಳ ಮೇಲೆ ಹೊರೆ ಹೊರಿಸುತ್ತಿದೆ, ಇದು ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ. ಒಬ್ಬ ಪಿಹೆಚ್.ಡಿ. ಮಹಿಳಾ ವಿದ್ಯಾರ್ಥಿಯ ಹೇಳಿಕೆ ಇದು. ಕಠಿಣ ಲಾಕ್ ಡೌನ್ ವಿದ್ಯಾರ್ಥಿಗಳನ್ನು ಅದುಮಿತು. ಸಂಶೋಧನಾ ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಇರಲು ಸಾಧ್ಯವಾಗಲಿಲ್ಲ. ಕೆಲವರಿಗೆ ತರಗತಿಗೆ ಹೋಗಿ ಬರಲಷ್ಟೆ ಅನುಮತಿ ಸಿಕ್ಕಿತು. ನಾವು ಕ್ಯಾಟರರ್ ನಿಂದ ಊಟ, ತಿಂಡಿಯ ಡಬ್ಬಿ ಪಡೆದು ನಮ್ಮ ಕೋಣೆಯಲ್ಲಿ ತಿನ್ನಬೇಕಿತ್ತು. ಸಂಸ್ಥೆಯಲ್ಲಿ ಒಂದು ಕೋವಿಡ್ ಬ್ರಿಗೇಡ್ ರಚಿಸಿದ್ದರು. ಅದು ವಿದ್ಯಾರ್ಥಿಗಳು ಮಾತನಾಡುವುದು ಕೂಡ ಸಾಧ್ಯವಿಲ್ಲದ ಸ್ಥಿತಿ ನಿರ್ಮಿಸಿತು. ಎಲ್ಲರ ನಡುವೆ ಎಲ್ಲರೂ ಒಂಟಿಯಾಗಿ ಉಳಿಯಬೇಕಾದುದು ಅವರ ಮಾನಸಿಕ ಸ್ಥಿತಿಯ ಮೇಲೆ ಹೊಡೆತ ನೀಡಿತು.
ಇನ್ನು ಕ್ಯಾಂಪಸ್ ನಿಂದ ಹೊರಗೆ ಹೋಗಬೇಕೆಂದರೆ ಬರಹದಲ್ಲಿ ಅನುಮತಿ ಪತ್ರ ಪಡೆಯಬೇಕಿತ್ತು. ಎರಡನೆಯ ಅಲೆಯಲ್ಲಿ ಕೆಲವು ಸಮಯ ಅಂಗಡಿಗಳು ತೆರೆದಾಗಲೂ ಹೊರಗೆ ಬಿಡಲಿಲ್ಲ. ಈಗಷ್ಟೆ ಅದು ಸಾಧ್ಯವಾಗಿದೆ ಎಂದರು ಅವರು. ಕಳೆದ ವರುಷ ಕೋವಿಡ್ ಲಕ್ಷಣ ಕಾಣಿಸಿದ್ದರಿಂದ ಸಂದೀಪ್ ಕುಮಾರ್ ಎಂಬ ಎಂ.ಟೆಕ್. ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ. ಜೀವಶಾಸ್ತ್ರ ವಿಭಾಗದ ಪಿಹೆಚ್.ಡಿ. ವಿದ್ಯಾರ್ಥಿಯೊಬ್ಬರ ಪ್ರಕಾರ ಮಾನಸಿಕ ನಿರ್ವಹಣೆ ಸಾಲದು, ನಾನು ಅದನ್ನು ಬಯಸಿದಾಗ ವಾರದಲ್ಲಿ ಎರಡು ದಿನ ಮಾತ್ರ, ಮೂರು ಗಂಟೆ ಕಾಲ ಕ್ಯಾಂಪಸಿಗೆ ಬರುತ್ತಿದ್ದರು. ಎಷ್ಟು ಜನ ಅವರ ಸಲಹೆ ಪಡೆಯಲು ಸಾಧ್ಯ?
2020ರಲ್ಲಿ ಒಂದು ಅನಾಮಧೇಯ ಪತ್ರ ಕ್ಯಾಂಪಸ್ ನಲ್ಲಿ ಮತ್ತು ಹೊರಗೆ ಪ್ರಚಾರವಾಗಿತ್ತು. ವಿದ್ಯಾರ್ಥಿಗಳನ್ನು ಸರಕು ಹಡಗಿನಂತೆ ನೋಡುವ, ಸಂಪೂರ್ಣ ತಪ್ಪು ನಿರ್ವಹಣೆಯ ಸಂಸ್ಥೆ ಎಂದು ಅದರಲ್ಲಿ ದೊಡ್ಡದಾಗಿ ಬರೆಯಲಾಗಿತ್ತು. ಸಾಂಕ್ರಾಮಿಕ ಕಾಲದಲ್ಲಿ ಒಟ್ಟಾರೆ ಪ್ರಯೋಗಗಳೆಲ್ಲ ಮಕಾಡೆ ಮಲಗಿದವು ಎಂಬುದೂ ಆ ಪತ್ರದಲ್ಲಿದ್ದ ಮುಖ್ಯ ವಿಷಯ. ವಿದ್ಯಾರ್ಥಿಗಳನ್ನು ಏಕಾ ಏಕಿ ಕಳುಹಿಸಿದರು. ಹಾಸ್ಟೆಲ್ ಗಳು ನಿರ್ವಹಣೆ ಕಳೆದುಕೊಂಡವು. ಓಟ್ಟಾರೆ ಈ ಪತ್ರ ಸಂಸ್ಥೆಯ ಮತ್ತು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಂಬುದನ್ನು ಮರೆಯುವಂತಿಲ್ಲ. ಪ್ರಯೋಗ ಮತ್ತು ಪಾಠದ ಕಾಲ ತುಂಡು ತುಂಡಾಯಿತು. ಆನ್ ಲೈನ್ ಪಾಠಗಳು ಸಾಂಪ್ರದಾಯಿಕ ತರಗತಿಗಳಂತೆ ಮನಸ್ಸಿಗೆ ತುಂಬುವವುಗಳಾಗಿರಲಿಲ್ಲ.
ಸಿಬ್ಬಂದಿ ಬಗ್ಗೆ ದೂರಿಲ್ಲ ಎನ್ನುತ್ತಾರೆ ಪೋಲೀಸರು
ಬೆಂಗಳೂರು ಪೊಲೀಸರು ಪ್ರತಿಯೊಂದು ಆತ್ಮಹತ್ಯೆಯೆ ಬಗೆಗೂ ತನಿಖೆ ನಡೆಸಿದ್ದು, ಸಿಬ್ಬಂದಿ ಬಗ್ಗೆ ಯಾವುದೇ ದೂರು ಬಂದಿಲ್ಲ. ಮರಣ ಪತ್ರಗಳಲ್ಲಿ ಸಹ ಯಾರೂ ಸಂಸ್ಥೆಯ ಸಿಬ್ಬಂದಿಯ ಬಗೆಗೆ ಬರೆದಿಲ್ಲ ಎಂದಿದ್ದಾರೆ. ಆದರೆ ಆತ್ಮಹತ್ಯೆಗಳನ್ನು ಅಸ್ವಾಭಾವಿಕ ಎಂದು ದಾಖಲಿಸಿಕೊಂಡಿರುವ ಪೊಲೀಸರು, ತಾಕೊಲೆ ನಡೆದ ಸ್ಥಳದಲ್ಲಿ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಿದ್ದಾರೆ. ಪ್ರತಿ ಬಾರಿಯ ತನಿಖೆಯಲ್ಲೂ ಕಲಿಕೆಯ ಒತ್ತಡ ಒಂದು ಕಾರಣವಾಗಿತ್ತು. “ಸ್ನೇಹಿತರು, ಸಹಪಾಠಿಗಳು, ಸುತ್ತಮುತ್ತ ಎಲ್ಲ ತನಿಖೆಯಲ್ಲೂ ನಮಗೆ ತಿಳಿದದ್ದು, ಆತ್ಮಹತ್ಯೆಗೆ ವ್ಯಕ್ತಿಗತ ಕಾರಣಗಳು” ಎನ್ನುತ್ತಾರೆ ಪೋಲೀಸರು.
ಈ ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ಹೆತ್ತವರು ಕೂಡ ಸಂಸ್ಥೆಯತ್ತ ಬೊಟ್ಟು ಮಾಡಿಲ್ಲ. ಅಷ್ಟೇ ಅಲ್ಲ ಸಾವಿಗೀಡಾದವರ ವಸ್ತುಗಳನ್ನು ಪರಿಶೀಲಿಸಿದಾಗ ಅಲ್ಲಿ ಆಂಟಿ ಡಿಪ್ರೆಸೆಂಟ್, ಆಂಟಿ ಆಂಕ್ಸೈಟಿ ಮಾತ್ರೆಗಳು ದೊರಕಿವೆ. ಅಲ್ಲದೆ ಆತ್ಮಹತ್ಯೆ ಮಾಡಿಕೊಂಡವರು ವಿಭಿನ್ನ ಹಿನ್ನೆಲೆಯವರಾಗಿದ್ದರು.