ರೈತರ ಹೋರಾಟವನ್ನು ಪ್ರಾಯೋಜಿತ ಹೋರಾಟ ಎಂದ ಮುಖ್ಯಮಂತ್ರಿ: ಕ್ಷಮೆಯಾಚನೆಗೆ ಕಾಂಗ್ರೆಸ್ ಒತ್ತಾಯ

Prasthutha|

ಬೆಂಗಳೂರು: ‘ದೆಹಲಿಯಲ್ಲಿ ತಮ್ಮ ಹಕ್ಕಿಗಾಗಿ ರೈತರು ನಡೆಸುತ್ತಿರುವ ಹೋರಾಟವನ್ನು ‘ಪ್ರಾಯೋಜಿತ ಹೋರಾಟ’ ಎಂಬ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸಭೆಯಲ್ಲಿಂದು ಬೆಲೆ ಏರಿಕೆ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಪ್ರಾಯೋಜಿತ ಹೋರಾಟ ಎಂದು ಕರೆದರು. ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

- Advertisement -


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಮುಖ್ಯಮಂತ್ರಿ ಹೇಳಿಕೆ ಆಘಾತಕಾರಿ. ಅವರು ಕೂಡಲೇ ರೈತರ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು. ವಿಧಾನಸೌಧದ ಬಳಿ ಸೋಮವಾರ ಮಧ್ಯಾಹ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ‘ತಮ್ಮ ಹಕ್ಕಿನ ರಕ್ಷಣೆಗಾಗಿ ಕಳೆದ ಒಂದು ವರ್ಷದಿಂದ ರೈತರು ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದು, ಈ ಹೋರಾಟವನ್ನು ಪ್ರಾಯೋಜಿತ ಹೋರಾಟ ಎಂದು ಮುಖ್ಯಮಂತ್ರಿಗಳು ಹೇಳಿರುವುದು ಸರಿಯಲ್ಲ. ರೈತರು ಉತ್ತಮ ಉದ್ದೇಶದಿಂದ ಹೋರಾಟ ಮಾಡುತ್ತಿದ್ದು, ಈ ಹೋರಾಟ ಕೇವಲ ಅಲ್ಲಿರುವ ರೈತರ ಹೋರಾಟವಲ್ಲ. ಇದು ಇಡೀ ದೇಶದ ರೈತರಿಗೆ ಸಂಬಂಧಿಸಿದ ಹೋರಾಟ. ಅವರ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಈ ಹೋರಾಟಕ್ಕೆ ವಿಶ್ವದ ಅನೇಕ ನಾಯಕರುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.


ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಇಂತಹ ಹೇಳಿಕೆ ನೀಡಿದ್ದಾರೆ. ರೈತರ ಹೋರಾಟ ಪ್ರಾಯೋಜಿತ ಆಗಿರುವುದು ನಿಜವೇ ಆಗಿದ್ದರೆ ಯಾರು ಈ ಹೋರಾಟ ಪ್ರಾಯೋಜಿಸುತ್ತಿದ್ದಾರೆ? ಕಾಂಗ್ರೆಸ್, ಬಿಜೆಪಿ ಅಥವಾ ಮತ್ತ್ಯಾರೂ ಕೂಡ ಪ್ರಾಯೋಜಕತ್ವ ನೀಡಿಲ್ಲ. ಪ್ರಜಾಪ್ರಭುತ್ವ ದೇಶದಲ್ಲಿ ಅವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಇದುವರೆಗೂ ಅವರ ಅಳಲು ಕೇಳಿಲ್ಲ, ಯಾಕೆ? ಎಂದು ಶಿವಕುಮಾರ್ ಪ್ರಶ್ನಿಸಿದರು. ಬಿಜೆಪಿ ಅವರ ಹೇಳಿಕೆಯಂತೆ ಈ ಹೋರಾಟ ಕಾಂಗ್ರೆಸ್ ಪ್ರಾಯೋಜಿತವಲ್ಲ. ರೈತರು ಸದುದ್ದೇಶದಿಂದ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ದೇಶಾದ್ಯಂತ ರೈತರ ಬೆನ್ನಿಗೆ ನಿಂತಿದ್ದೇವೆ ಎಂದರು.



Join Whatsapp