ಬ್ಯಾರಿ ಅಕಾಡೆಮಿಯ ನೂತನ ವೆಬ್ ಸೈಟ್ ಅನಾವರಣ

Prasthutha|

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗಾಗಿ ಸರಕಾರದಿಂದ ಅಧಿಕೃತವಾಗಿ ನೀಡಲ್ಪಟ್ಟ ನೂತನವಾಗಿ ವಿನ್ಯಾಸಗೊಂಡ ವೆಬ್ ಸೈಟನ್ನು ಮಂಗಳವಾರ ಸಂಜೆ ಬ್ಯಾರಿ ಅಕಾಡೆಮಿ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಲೋಕಾಪರ್ಣಗೈದರು.

- Advertisement -


ಇದೇ ವೇಳೆ ಮಾತನಾಡಿದ ಅವರು, ಅಕಾಡೆಮಿಯು ಪ್ರಾರಂಭವಾದಾಗಿನಿಂದ ಅಂದರೆ 2009ರಿಂದ ಈ ತನಕ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಅಕಾಡೆಮಿಯ ವೆಬ್ ಸೈಟನ್ನು ಹೊಂದಿತ್ತು. ಇದನ್ನು ಪ್ರತಿ ವರ್ಷ ನವೀಕರಣಗೊಳಿಸಬೇಕಾಗಿತ್ತು. ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸರಕಾರಕ್ಕೆ ಮನವಿ ಮಾಡಿದ ಮೇರೆಗೆ ಸರಕಾರದಿಂದ ನೂತನವಾಗಿ ವಿನ್ಯಾಸಗೊಂಡು ಏಕರೂಪತೆಯನ್ನು ಹೊಂದಿರುವ ವೆಬ್ ಸೈಟ್ ನಮಗೆ ಉಚಿತವಾಗಿ ಲಭಿಸಿದೆ. ಇದನ್ನು ಅಕಾಡೆಮಿಯ ಸಿಬ್ಬಂದಿಯೇ ನಿರ್ವಹಿಸಬಹುದಾಗಿದೆ. ಇದರಿಂದಾಗಿ ಅಕಾಡೆಮಿಯ ದಿನನಿತ್ಯದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ತಕ್ಷಣ ವೆಬ್ ಸೈಟಿನಲ್ಲಿ ಆಳವಡಿಸಬಹುದಾಗಿದೆ ಎಂದರು.


ಪ್ರಪಂಚದಾದ್ಯಂತವಿರುವ ಎಲ್ಲಾ ಬ್ಯಾರಿ ಮತ್ತು ಇತರ ಭಾಷಿಕರು ಅಕಾಡೆಮಿಯ ಚಟುವಟಿಕೆ, ಮುಂದಿನ ಯೋಜನೆ,ಮತ್ತು ಅಕಾಡೆಮಿ ಬಗೆಗಿನ ಮಾಹಿತಿಯನ್ನು ಈ ವೆಬ್ ಸೈಟ್ ಮೂಲಕ ಪಡೆಯಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸ್ವಾಗತಗೈದ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಅಕಾಡೆಮಿಯು ವಿಭಿನ್ನವಾದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ, ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲೂ ಆನ್ ಲೈನ್ ಮೂಲಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಇದೀಗ ಇಲಾಖೆಯಿಂದ ಅಧಿಕೃತವಾಗಿ ಅಕಾಡೆಮಿಗೆ ವೆಬ್ ಸೈಟ್ ಲಭ್ಯವಾಗಿದ್ದು, ಇದರಿಂದ ಅಕಾಡೆಮಿಯ ಎಲ್ಲಾ ಚಟುವಟಿಕೆಗಳ ಮಾಹಿತಿಯನ್ನು ಇದರಲ್ಲಿ ಅಳವಡಿಸಿ ವಿಶ್ವದಾಧ್ಯಂತ ಇದರ ಪ್ರಚಾರ ಮತ್ತು ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದರು.

- Advertisement -

ಮುಖ್ಯ ಅತಿಥಿಯಾಗಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಭಾಗವಹಿಸಿದರು. ಅಕಾಡೆಮಿ ನೂತನ ಸದಸ್ಯರಾದ ಸಾದತ್ ಶಿವಮೊಗ್ಗ ಉಪಸ್ಥಿತರಿದ್ದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶಂಶೀರ್ ಬುಡೋಳಿ ವಂದಿಸಿದರು.


ಬ್ಯಾರಿ ಅಕಾಡೆಮಿಯ ನೂತನ ವೆಬ್ ಸೈಟ್ ಲಿಂಕ್ https://bearyacademy.karnataka.gov.in/



Join Whatsapp