ಅಯೋಧ್ಯೆ: ಆಮ್ ಆದ್ಮಿ(AAP) ಪಕ್ಷ ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರ ಆರಂಭಿಸಿದೆ. ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ರಾಮ ಜನ್ಮಭೂಮಿ ಮತ್ತು ಅಯೋಧ್ಯೆಯ ಹನುಮನಗರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಈ ನಡುವೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಪಕ್ಷದ ಉತ್ತರಪ್ರದೇಶ ಉಸ್ತುವಾರಿ ಸಂಜಯ್ ಸಿಂಗ್ ರಾಮ ಜನ್ಮಭೂಮಿಯಲ್ಲಿ ಮಂತ್ರಗಳನ್ನು ಪಠಿಸಿ ಸರಯೂ ನದಿಯಲ್ಲಿ ಮಿಂದೆದ್ದು ಸಾಧುಗಳೊಂದಿಗೆ ಮಧ್ಯಾಹ್ನದ ಊಟವನ್ನು ಮಾಡಿದ್ದಾರೆ.
‘ರಾಮ ರಾಜ್ಯವು ಶುದ್ಧ ಆಡಳಿತ ನಿರ್ವಹಣೆಗೆ ದೊಡ್ಡ ಸ್ಫೂರ್ತಿಯಾಗಿದೆ. ಶ್ರೀರಾಮನ ಆಶೀರ್ವಾದದೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಪ್ರಾಮಾಣಿಕತೆ ಮತ್ತು ಅಭಿವೃದ್ಧಿಗೆ ಹೆಸರುವಾಸಿಯಾಗಿದೆ. ತಿರಂಗಾ ಯಾತ್ರೆಯು ಇಂತಹ ರಾಜಕೀಯಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಶ್ರೀ ರಾಮಚಂದ್ರ ಜಿ ಅವರ ಆಶೀರ್ವಾದದಿಂದ ನಾವು ತ್ರಿವರ್ಣ ಧ್ವಜವನ್ನು ಹಾರಿಸಿ ನಿಜವಾದ ರಾಷ್ಟ್ರೀಯತೆಯನ್ನು ಕಲಿಸುತ್ತೇವೆ” ಎಂದು ಸಿಸೋಡಿಯಾ ಹೇಳಿದರು. ಮಂಗಳವಾರ ಫೈಝಾಬಾದ್‌ನಲ್ಲಿ ನಡೆಯಲಿರುವ ಪಕ್ಷದ ತಿರಂಗಾ ಯಾತ್ರೆಯನ್ನು ಇವರು ಮುನ್ನಡೆಸಲಿದ್ದಾರೆ.