ಬೆಂಗಳೂರು: ತರಾತುರಿಯಲ್ಲಿ ಜಾರಿಗೊಳಿಸಲಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಇದೇ ಸೋಮವಾರದಿಂದ ಆರಂಭಗೊಳ್ಳಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಮುಕ್ತ ಚರ್ಚೆ ನಡೆಸಿ, ನೀತಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಶಕಗಳ ನಂತರ ಜಾರಿಗೊಳಿಸಲು ಉದ್ದೇಶಿಸಿರುವ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಹೊಸ ಬದಲಾವಣೆಯ ನಿರೀಕ್ಷೆಯಲ್ಲಿದ್ದರು, ಆದರೆ ಈ ನಿರೀಕ್ಷೆಗೆ ತದ್ವಿರುದ್ಧವಾಗಿ ವಾಸ್ತವಕ್ಕೆ ವಿರುದ್ಧವಾದ ನೀತಿಯನ್ನು ತರಲಾಗಿದೆ. ಜನರನ್ನು ಕನಸಿನ ಲೋಕದಲ್ಲಿ ತೇಲಾಡಿಸುವ ಅಸಮರ್ಪಕ ಹಾಗೂ ಅವೈಜ್ಞಾನಿಕವಾದ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ.
ಲೋಕಸಭೆಯಲ್ಲಾಗಲಿ, ವಿಧಾನಸಭೆಯಲ್ಲಾಗಲಿ ಈ ಬಗ್ಗೆ ಚರ್ಚೆ ನಡೆಸದೆ ಹಿಂಬದಿ ಬಾಗಿಲಿನ ಮುಖಾಂತರ ಜಾರಿಗೊಳಿಸಿರುವುದರ ಹಿಂದಿರುವ ಉದ್ದೇಶವಾದರೂ ಏನು ? ಎಂದು ಅವರು ಪ್ರಶ್ನಿಸಿದರು. ಈ ನೀತಿಯು ಶಿಕ್ಷಣವನ್ನು ಕೇಂದ್ರೀಕರಿಸುವುದರೊಂದಿಗೆ ಖಾಸಗೀಕರಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರ ಹೊಂದಿದೆ. 2016 ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸುಗೊಳಿಸಿದ ಸುಬ್ರಮಣ್ಯನ್ ನೇತೃತ್ವದ ಸಮಿತಿಯ ವರದಿಯನ್ನು ಯಾಕಾಗಿ ಸಾರ್ವಜನಿಕಗೊಳಿಸಲಿಲ್ಲ ಹಾಗೂ ಅವರ ವರದಿಯ ಅಭಿಪ್ರಾಯಗಳನ್ನು ಯಾಕಾಗಿ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದ ಅಥಾವುಲ್ಲಾ, ತದನಂತರ ಕಸ್ತೂರಿ ರಂಗನ್ ರವರ ನೇತೃತ್ವದಲ್ಲಿ ರೂಪಿಸಲಾದ ನೀತಿಯಲ್ಲಿರುವ ತೊಡಕುಗಳ ಕುರಿತು 2019 ರಲ್ಲಿಯೇ ಕ್ಯಾಂಪಸ್ ಫ್ರಂಟ್ ವಿರೋಧ ವ್ಯಕ್ತಪಡಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಶಿಫಾರಸ್ಸು ವರದಿ ನೀಡಿತ್ತು. ಆದರೆ ನಮ್ಮ ಹಾಗೂ ಹಲವಾರು ಶಿಕ್ಷಣ ತಜ್ಞರು ನೀಡಿದ ಯಾವ ಅಭಿಪ್ರಾಯಗಳನ್ನು ಸಹ ಪರಿಗಣಿಸದೆ ಸರ್ವಾಧಿಕಾರಿಯಾಗಿ ಕೈಗೊಂಡ ತೀರ್ಮಾನವಾಗಿದೆ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಈ ನೀತಿಯನ್ನು ಜುಲೈ 29 , 2020ರಲ್ಲಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಜಾರಿಗೊಳಿಸುವುದರ ಕುರಿತು ಕೇಂದ್ರ ಸರ್ಕಾರ ಹೇಳಿಕೆ ನೀಡಿತ್ತು.
ಈ ನೀತಿಯು ಪ್ರಾದೇಶಿಕತೆಗೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ಹುನ್ನಾರವನ್ನರಿತ ತಮಿಳುನಾಡು ಸರ್ಕಾರ ಸಂಪೂರ್ಣವಾಗಿ ಈ ನೀತಿಯನ್ನು ತಿರಸ್ಕರಿಸಿದೆ ಹಾಗೂ ಕೇರಳ ಸರ್ಕಾರವು ಇದರ ವಿರುದ್ಧ ಅಭಿಪ್ರಾಯದ ಶಿಫಾರಸ್ಸು ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಅದಲ್ಲದೆ ಪಶ್ಚಿಮ ಬಂಗಾಳ ಸರ್ಕಾರವು ಈ ನೀತಿಯನ್ನು ಜಾರಿಗೊಳಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಇದರೊಂದಿಗೆ ದೆಹಲಿಯ ಉಪನ್ಯಾಸಕರು ಕೂಡ ಇದರ ವಿರುದ್ದ ಪ್ರತಿಭಟಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇಂತಹ ಗೊಂದಲದ ಗೂಡಾಗಿರುವ ಈ ನೀತಿಯನ್ನು ಇದೀಗ ಕರ್ನಾಟಕದಲ್ಲಿ ಯಾವುದೇ ಚರ್ಚೆ ನಡೆಸದೆ ಜಾರಿಗೊಳಿಸಿರುವುದು ಖಂಡನೀಯ. ಈಗಾಗಲೇ ಕರ್ನಾಟಕದಲ್ಲಿ ಇದರ ವಿರುದ್ಧ ಹಲವಾರು ಹೋರಾಟಗಳು ನಡೆಯುತ್ತಿದ್ದು, ವಿರೋಧ ಪಕ್ಷಗಳು ಕೂಡ ವಿರೋಧ ವ್ಯಕ್ತಪಡಿಸಿವೆ ಎಂದು ತಿಳಿಸಿದರು.
ಪ್ರಾರಂಭದಿಂದಲೂ ಈ ಶಿಕ್ಷಣ ನೀತಿಯ ಅಪಾಯ ಮತ್ತು ಸಮಸ್ಯೆಗಳ ಬಗ್ಗೆ ಕ್ಯಾಂಪಸ್ ಫ್ರಂಟ್ ಸಮಾಜದಲ್ಲಿ ಜಾಗೃತಿ ಮೂಡಿಸುತ್ತ, ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಈ ನೀತಿಯನ್ನು ಜಾರಿಗೊಳಿಸಬಾರದು ಎಂದು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ರವರಿಗೆ ಮನವಿ ಸಲ್ಲಿಸಿ, ರಾಜ್ಯಾದ್ಯಂತ ಭಿತ್ತಿ ಪತ್ರ ಪ್ರದರ್ಶನ ಮಾಡಿ, ದೊಡ್ಡ ಮಟ್ಟದ ಪ್ರತಿಭಟನೆ ಸಹ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಸಚಿವರ ಕಚೇರಿಗೆ ಮುತ್ತಿಗೆ ಹಾಕಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಸಚಿವರು ಹಾಜರಾಗಿದ್ದ NEP-2020 ರ ಉದ್ಘಾಟನಾ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಿ ಕ್ಯಾಂಪಸ್ ಫ್ರಂಟ್ ಪ್ರತಿಭಟಿಸಿತ್ತು ಎಂದು ಅಥಾವುಲ್ಲಾ ತಿಳಿಸಿದರು.
ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ್ದ ಸಚಿವರು, ನಮ್ಮ ಆರೋಪಗಳು ಸುಳ್ಳು, ವಿರೋಧಿಸುವವರು ಚರ್ಚೆಗೆ ಬನ್ನಿ ಎಂಬ ಹೇಳಿಕೆ ನೀಡಿದ್ದರು, ಕ್ಯಾಂಪಸ್ ಫ್ರಂಟ್ ಸಚಿವರ ಸವಾಲನ್ನು ಸ್ವೀಕರಿಸಿ ರಾಜ್ಯಾದ್ಯಂದ ಭಿತ್ತಿ ಪತ್ರ ಪ್ರದರ್ಶಿಸಿ ಚರ್ಚೆಗೆ ಸಿದ್ಧವಿರುವುದಾಗಿ ಸಚಿವರಿಗೆ ಸಂದೇಶ ನೀಡಿ, ಸಾಮಾಜಿಕ ಜಾಲತಾಣಗಳ ಮತ್ತು ಮಾಧ್ಯಮಗಳ ಮುಖಾಂತರ ಸಚಿವರನ್ನು ಬಹಿರಂಗ ಚರ್ಚೆಗೆ ಸಹ ಆಹ್ವಾನಿಸಿತ್ತು. ಸದ್ಯಕ್ಕೆ ಇದರ ಕುರಿತು ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿದ್ದರೂ ಹಠಮಾರಿ ಧೋರಣೆಯೊಂದಿಗೆ ಉನ್ನತ ಶಿಕ್ಷಣದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ. ರಾಜ್ಯ ಸರಕಾರದ ಈ ಸರ್ವಾಧಿಕಾರದ ನಡೆಯನ್ನು ಕ್ಯಾಂಪಸ್ ಫ್ರಂಟ್ ಎಲ್ಲಾ ರೀತಿಯಲ್ಲೂ ಪ್ರತಿರೋಧಿಸಲಿದೆ, ಒಂದು ವೇಳೆ ಈ ಸೋಮವಾರದಿಂದ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಇದರ ಕುರಿತು ಚರ್ಚೆ ನಡೆಸಿ ವಿಧಾನಸಭೆಯಲ್ಲಿ ಚರ್ಚಿಸಿ ಈ ನೀತಿಯನ್ನು ಹಿಂಪಡೆಯದಿದ್ದರೆ ವಿದ್ಯಾರ್ಥಿ ಸಮೂಹವನ್ನು ಒಗ್ಗೂಡಿಸಿ ವಿಧಾನಸೌಧಕ್ಕೆ ಕ್ಯಾಂಪಸ್ ಫ್ರಂಟ್ ಮುತ್ತಿಗೆ ಹಾಕಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ, ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಸದಸ್ಯ ಹುಸೇನ್ ಬಾಶಾ ಕೊಪ್ಪಳ, ಸಂಘಟನೆಯ ಬೆಂಗಳೂರು ಜಿಲ್ಲಾಧ್ಯಕ್ಷ ಆಕಿಬ್ ಉಪಸ್ಥಿತರಿದ್ದರು.