ಬೆಂಗಳೂರು: ತಳಮಟ್ಟದಿಂದಲೇ ಕ್ರೀಡಾಪಟುಗಳನ್ನು ತಯಾರುಮಾಡಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 1666 ದೈಹಿಕ ಶಿಕ್ಷಕರಿಗೆ ಗುಣಮಟ್ಟದ ವೈಜ್ಞಾನಿಕ ತರಬೇತಿ ನೀಡಲು ಯೋಜನೆ ಸಿದ್ಧ. ಶೀಘ್ರದಲ್ಲೇ ತರಬೇತಿ ಆರಂಭಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಸರ್ಕಾರ ಈಗಾಗಲೆ ವಿವಿಧ ಯೋಜನೆ ಜಾರಿಗೆ ತಂದಿದೆ. ಅದಕ್ಕಿಂತ ಮುಖ್ಯವಾಗಿ ತಳಮಟ್ಟದಲ್ಲೇ ಕ್ರೀಡಾಪಟುಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಲು ದೈಹಿಕ ಶಿಕ್ಷರಿಗೇ ಕ್ರೀಡಾ ಇಲಾಖೆಯಿಂದ ವೈಜ್ಞಾನಿಕ ತರಬೇತಿ ನೀಡಲು ತೀರ್ಮಾನಿಸಲಾಗಿದೆ.
ವಿಕಾಸ ಸೌಧದಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗಿದೆ. ಕ್ರೀಡಾ ವಿಜ್ಞಾನ ಕೇಂದ್ರದ ಮೂಲಕ ಗ್ರಾಮೀಣ ಮಟ್ಟದ ಕ್ರೀಡಾಪ್ರತಿಭೆಗಳನ್ನು ಗುರುತಿಸಲಾಗುತ್ತಿದ್ದು, ಅಂತವರಿಗೆ ತರಬೇತಿ ಪಡೆದ 1666 ಪರಿಣಿತ ದೈಹಿಕ ಶಿಕ್ಷಕರಿಂದ ತರಬೇತಿ ನೀಡಲಾಗುವುದು. ಶಿಕ್ಷಣ ಇಲಾಖೆಯಿಂದ ಈಗಾಗಲೆ 1666 ದೈಹಿಕ ಶಿಕ್ಷಕರ ಪಟ್ಟಿ ಪಡೆಯಲಾಗಿದ್ದು, ತಿಂಗಳಾಂತ್ಯದಲ್ಲಿ ಕ್ರೀಡಾ ಇಲಾಖೆಯಿಂದ ತರಬೇತಿ ನೀಡಲು ಆರಂಭಿಸಲಾಗುವುದು ಎಂದರು ಸಚಿವರು ತಿಳಿಸಿದರು.
ಖೇಲೊ ಇಂಡಿಯಾ ಕೇಂದ್ರ ಪ್ರಾರಂಭಿಸಲು ಹಣ ಬಿಡುಗಡೆಯಾದರೂ ಆರಂಭವಾಗದ ಕೇಂದ್ರ- ಸಚಿವರು ಗರಂ
ಇದೇ ವೇಳೆ ಖೇಲೊ ಇಂಡಿಯಾ ಕೇಂದ್ರದ ಬಗ್ಗೆ ಚರ್ಚಿಸಿದ ಸಚಿವರು, ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 31 ಕೇಂದ್ರಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಈಗಾಗಲೆ ಅನುದಾನ ನೀಡಿದೆ. ಪ್ರತಿ ಕೇಂದ್ರದ ಮೂಲಕ ಸೌಕರ್ಯಕ್ಕೆ ರೂ.5 ಲಕ್ಷ ಹಾಗೂ ತರಬೇತಿಗೆ ರೂ. 5 ಲಕ್ಷ ನೀಡಿದೆ. ಆದರೆ ಈ ವರೆಗೆ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ. ಕೇವಲ ಘೋಷಣೆಗೆ ಯೋಜನೆ ಸೀಮಿತವಾದರೆ ಹೇಗೆ. ತಕ್ಷಣ ಕೆಲಸ ಆರಂಭಿಸದಿದ್ದರೆ ಸುಮ್ಮನಿರಲ್ಲ. ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು. ವಾರದೊಳಗೆ ಕೆಲಸ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಸೆ. 24 ರಂದು ವೈಮಾನಿಕ ತರಬೇತಿ ಶಾಲೆ ಪುನಾರಂಭ
ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆರಂಭ ಆಗಲೇಬೇಕು. ಇನ್ನಷ್ಟು ಸಮಯ ನೀಡಲು ಸಾಧ್ಯವಿಲ್ಲ. ಅಧಿವೇಶನ ಮುಗಿದ ಮಾರನೆ ದಿನ ವೈಮಾನಿಕ ತರಬೇತಿ ಶಾಲೆ ಪುನಾರಂಭ ಆಗಬೇಕು. ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಉದ್ಘಾಟಿಸಲಾಗುವುದು ಎಂದು ಸಚಿವ ಡಾ. ನಾರಾಯಣಗೌಡ ತಿಳಿಸಿದರು. 45 ಹಳೆ ವಿದ್ಯಾರ್ಥಿಗಳಿದ್ದು, ಈಗಾಗಲೆ 35 ವಿದ್ಯಾರ್ಥಿಗಳು ತರಬೇತಿ ಪಡೆಯಲು ಬರುವುದಾಗಿ ತಿಳಿಸಿದ್ದಾರೆ. ಹಿಂದಿನ ಶುಲ್ಕ ದರದಲ್ಲೇ ತರಬೇತಿ ನೀಡಲಾಗುವುದು. ಹೊಸದಾಗಿ ಪ್ರವೇಶ ಪಡೆಯುವವರಿಗೆ ಪರಿಷ್ಕೃತ ದರ ನಿಗದಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಂದಿನ ಮಾರ್ಚ್ 5 ರಿಂದ ಖೇಲೊ ಇಂಡಿಯಾ ಯಿನಿವರ್ಸಿಟಿ ಗೇಮ್ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಕ್ರೀಡೆಯ ಆಯೋಜನೆಗೆ ರೂ. 25 ಕೋಟಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂಲ ಸೌಕರ್ಯಕ್ಕಾಗಿ ರೂ. 18 ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರಕ್ಕೂ ರೂ. 22 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅರ್ಥಿಕ ಇಲಾಖೆ ಪರಿಶೀಲನೆಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಅಲ್ಲದೆ ಅತಿ ಶೀಘ್ರದಲ್ಲಿ ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನ ಲೋಗೋ, ಥೀಮ್ ಸಾಂಗ್, ಜೆರ್ಸಿ ಲಾಂಚ್ ಆಗಬೇಕು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕ್ರೀಡಾ ಇಲಾಖೆ ಆಯುಕ್ತ ವೆಂಕಟೇಶ್, ಇಲಾಖೆ ಅಧಿಕಾರಿಗಳು ಉಪಸ್ಥಿರಿದ್ದರು.