ಮೈಸೂರು: ಮೈಸೂರಿನಲ್ಲಿ ಭೂ ಅಕ್ರಮಗಳ ಬಗ್ಗೆ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈ ತನಿಖೆಯನ್ನು ಮತ್ತೊಮ್ಮೆ ಮಾಡಿಸಲು ಮನೀಷ್ ಮೌದ್ಗಿಲ್ ಗೆ ಅಧಿಕಾರ ಕೊಟ್ಡವರು ಯಾರು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲೇ ಒಮ್ಮೆ ಆಗಿರುವ ತನಿಖೆಯನ್ನು ಇನ್ನೊಮ್ಮೆ ಮಾಡಿಸುವುದರಲ್ಲಿ ಏನು ಅರ್ಥವಿದೆ ಎಂದರು.
ಕೆಲವು ಐ.ಎ.ಎಸ್. ಅಧಿಕಾರಿಗಳಲ್ಲಿ ತಾವು ಮಾತ್ರ ಪ್ರಾಮಾಣಿಕರು, ಬೇರೆಯವರೆಲ್ಲ ಅಪ್ರಾಮಾಣಿಕರು ಎನ್ನು ಮನಸ್ಥಿತಿ ಇದೆ. ಅವರ ಮನಸ್ಸಿಂದ ಇಂತಹ ಮನಸ್ಥಿತಿಯನ್ನು ತೆಗೆಯಬೇಕು ಎಂದರು.
ಏನಾದರೂ ತಪ್ಪಿದ್ದರೆ ತನಿಖೆ ಮಾಡಲಿ, ಶಿಕ್ಷೆಯಾಗಲಿ. ನಮ್ಮ ಅಭ್ಯಂತರ ಇಲ್ಲ. ಆದರೆ ಅದಕ್ಕೆ ಒಂದು ವ್ಯವಸ್ಥೆ ಇರುತ್ತದೆ, ರೀತಿ-ನೀತಿ ಇರುತ್ತದೆ. ಐ.ಎ.ಎಸ್. ಅಧಿಕಾರಿಗಳು ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಎರಡು ವರ್ಷದ ಹಿಂದೆ ಸರ್ಕಾರ ದೊಡ್ಡ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡಿತು. ಅದರ ಭೂ ದಾಖಲೆಗಳನ್ನು ಸರಿಪಡಿಸುವ ಕೆಲಸವನ್ನು ಮನೀಷ್ ಮೌದ್ಗಿಲ್ಗೆ ವಹಿಸಲಾಗಿದೆ. ಎರಡು ವರ್ಷ ಕಳೆದರೂ ಇನ್ನೂ 53 ಸಾವಿರ ರೈತರ ಭೂ ದಾಖಲೆಗಳ ಪರಿಶೀಲನೆಯನ್ನು ಮನೀಷ್ ಮೌದ್ಗಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಆದರೆ ಈಗಾಗಲೇ ತನಿಖೆಯಾಗಿರುವ ಭೂಅಕ್ರಮ ಆರೋಪದ ಬಗ್ಗೆ ಮತ್ತೊಮ್ಮೆ ತನಿಖೆಗೆ ತರಾತುರಿಯಲ್ಲಿ ಮುಂದಾಗಿರುವ ಉದ್ದೇಶ ಏನು ಎಂದು ಅವರು ಪ್ರಶ್ನಿಸಿದರು.