ಬೆಂಗಳೂರು: ಕನ್ಮಡ ನಾಡು, ನುಡಿ, ಜಲ, ನೆಲದ ಸಂರಕ್ಷಣೆಯ ಜತೆ ವಿಶ್ವದ ಎಲ್ಲೆಡೆ ನೆಲೆಸಿರುವ ಕನ್ನಡಿಗರ ಹಿತ ಕಾಪಾಡುವುದರ ಜತೆ ಅವರ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನಾರ್ತ್ ಅಮೆರಿಕ ವಿಶ್ವ ಕನ್ನಡಿಗರ ಸಂಘ ಆಯೋಜಿಸಿದ್ದ ನಾವಿಕ 6 ನೇ ವಿಶ್ವ ಕನ್ನಡ ಸಮ್ಮೇಳನವನ್ನು ವರ್ಚುವಲ್ ಆಗಿ ಉದ್ಘಾಟಿಸಿ ಮಾತನಾಡಿದರು.
ಕನ್ನಡವನ್ನು ಅಗ್ರಮಾನ್ಯ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕನ್ನಡಿಗರು ವಿವಿಧ ದೇಶಗಳಲ್ಲಿ ನೆಲೆಸಿದ್ದರೂ, ನಮ್ಮೆಲ್ಲರ ಮನಸ್ಸು ಹತ್ತಿರವಾಗಿದೆ. ನಮ್ಮ ನಡೆ, ನುಡಿ ಭಾವನೆಗಳೆಲ್ಲವೂ ಒಂದಾಗಿದೆ. ಅನಿವಾಸಿ ಭಾರತೀಯರು ವಿದೇಶದಿಂದಲೂ ಕರ್ನಾಟಕದ ಆಗುಹೋಗುಗಳಿಗೆ ಸ್ಪಂದಿಸುತ್ತಿದ್ದಾರೆ. ನಾವೂ ಸಹ ಅನಿವಾಸಿ ಕನ್ನಡಿಗರ ಬಗ್ಗೆ ಆದರ ಹಾಗೂ ಪ್ರೀತಿಯನ್ನಿಟ್ಟುಕೊಂಡಿದ್ದೇವೆ ಎಂದರು.
ಕನ್ನಡ ಸಂಸ್ಕೃತಿ, ಸಾಹಿತ್ಯ, ಕಲೆ, ಸಂಗೀತ ಮುಂತಾದ ಎಲ್ಲಾ ರಂಗದಲ್ಲಿಯೂ ಪ್ರಮುಖ ಸ್ಥಾನದಲ್ಲಿದೆ. ಕನ್ನಡದ ಸಾಹಿತಿಗಳು ಜೀವನದ ತಿರುಳನ್ನು ಸೊಗಸಾಗಿ ಹೇಳಿದ್ದಾರೆ. ಹಲವಾರು ನಾಯಕರು ಉತ್ತಮ ಆಡಳಿತ ನೀಡಿ, ದೇಶಕ್ಕೇ ಮಾದರಿಯಾಗಿದ್ದಾರೆ. ಅನಿವಾಸಿ ಕನ್ನಡಿಗರು ಎಲ್ಲರೂ ಹೆಮ್ಮೆ ಪಡುವ ರೀತಿಯಲ್ಲಿ ಬದುಕು ನಡೆಸಿದ್ದಾರೆ ಎಂದರು.
ಕರ್ನಾಟಕದ ನೈಸರ್ಗಿಕ ಸಂಪತ್ತು ನಮ್ಮೆಲ್ಲರಿಗೂ ಸೇರಿದ್ದು. ಅದನ್ನು ಉಳಿಸಿ ಬೆಳಸಬೇಕು. ಕನ್ನಡದ ನೆಲ, ಜಲದ ಸಂರಕ್ಷಣೆಗೆ ಸರ್ಕಾರ ಸದಾ ಸಿದ್ದವಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಕನ್ನಡಿಗರು ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ. ಅವರ ಹಿತರಕ್ಷಣೆಗೆ ನಮ ಸರ್ಕಾರ ಬದ್ಧವಾಗಿದ್ದು, ಅವರ ಆಶೋತ್ತರಗಳನ್ನು ಈಡೇರಿಸಲು ಸಿದ್ಧವಿದೆ. ಅನಿವಾಸಿ ಕನ್ನಡಿಗರ ಸಂಬಂಧಿಕರ ಸುರಕ್ಷತೆಯ ಹೊಣೆ ಸರ್ಕಾರದ್ದು ಎಂದರು.
ಮೂರು ದಿನಗಳ ಕಾಲ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನ ಅರ್ಥಪೂರ್ಣವಾಗಿ ನೆರವೇರಿ ತನ್ಮೂಲಕ ಕನ್ನಡಿಗರನ್ನು ಒಂದುಗೂಡಿಸುವ ಕೆಲಸವಾಗಲಿ ಎಂದು ಮುಖ್ಯಮಂತ್ರಿಗಳು ಶುಭ ಹಾರೈಸಿದರು.
ಕನ್ನಡಿಗರ ಭಾವನೆಗಳಿಗೆ ಅಂತರ ಎಂದೂ ಅಡ್ಡಿಯಾಗದು. ಸಮ್ಮೇಳನ ಕನ್ನಡಿಗರ ಬೆಳವಣಿಗೆಗೆ ಚಿಂತನೆ ನಡೆಸುವುದಲ್ಲದೆ, ಕನ್ನಡದ ಕಲೆ ಮತ್ತು ಸಾಹಿತ್ಯಕ್ಕೆ ಅವಕಾಶ ಒದಗಿಸುವ ವೇದಿಕೆಯಾಗಲಿ ಎಂದು ತಿಳಿಸಿದರು.