ಆತ್ಮಾಹುತಿ ಪ್ರಕರಣ: ನಿವೃತ್ತ ಐಪಿಎಸ್ ಅಧಿಕಾರಿ ಠಾಕೂರ್ ರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಉತ್ತರ ಪ್ರದೇಶ ನ್ಯಾಯಾಲಯ

Prasthutha|

ಲಕ್ನೋ: ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಸುಪ್ರೀಂ ಕೋರ್ಟ್ ಹೊರಾಂಗಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತ ನಿವೃತ್ತ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರನ್ನು ಲಖನೌ ನ್ಯಾಯಾಲಯವು ಸೆಪ್ಟೆಂಬರ್ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.


ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಠಾಕೂರ್ ಅವರನ್ನು ಲಖನೌ ಪೊಲೀಸರು ಬಂಧಿಸಿದ್ದರು. ಸುಪ್ರೀಂ ಕೋರ್ಟ್ ಹೊರಾಂಗಣದಲ್ಲಿ ಸಂತ್ರಸ್ತೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದರು. 2019ರಲ್ಲಿ ಬಿಎಸ್ಪಿ ಸಂಸದ ಅತುಲ್ ರಾಯ್ ಅವರು ವಾರಣಾಸಿಯ ತಮ್ಮ ಮನೆಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು 24 ವರ್ಷದ ಸಂತ್ರಸ್ತೆ ಆರೋಪಿಸಿದ್ದರು.

- Advertisement -


ಆತ್ಮಾಹುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರವು ತನಿಖಾ ಸಮಿತಿ ರಚಿಸಿತ್ತು. ಈ ಸಮಿತಿಯು ಘೋಸಿ ಕ್ಷೇತ್ರದ ಬಿಎಸ್ಪಿ ಸಂಸದ ಅತುಲ್ ರಾಯ್ ಮತ್ತು ಅಮಿತಾಭ್ ಠಾಕೂರ್ ಅವರು ಸಂತ್ರಸ್ತೆ ಮತ್ತು ಸಾಕ್ಷಿಯನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವರದಿ ನೀಡಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಶಿಫಾರಸ್ಸು ಮಾಡಿತ್ತು.


ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳಾದ 167 (ಹಾನಿ ಉಂಟುಮಾಡುವ ಉದ್ದೇಶದಿಂದ ಸಾರ್ವಜನಿಕ ಸೇವಕರು ತಪ್ಪಾದ ದಾಖಲೆ ರೂಪಿಸುವುದು), 195-ಎ (ಸುಳ್ಳು ಪುರಾವೆಗಳಿಂದ ಬೆದರಿಸುವುದು), 218 (ಸಾರ್ವಜನಿಕ ಅಧಿಕಾರಿ ತಪ್ಪಾದ ದಾಖಲೆಗಳನ್ನು ಸೃಷ್ಟಿಸುವುದು), 504 (ಉದ್ದೇಶಪೂರ್ವಕವಾಗಿ ಶಾಂತಿ ಉಲ್ಲಂಘಿಸುವುದು), 506 (ಕಿಮಿನಲ್ ಬೆದರಿಕೆ), 120-ಬಿ (ಕ್ರಿಮಿನಲ್ ಪಿತೂರಿ) ಅಡಿ ಪ್ರಕರಣಗಳನ್ನು ಠಾಕೂರ್ ವಿರುದ್ಧ ದಾಖಲಿಸಲಾಗಿದೆ.

- Advertisement -