ಬೆಂಗಳೂರು : ಕರ್ನಾಟಕದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಇಲಾಖೆಯ ಅಧೀನದ ನಗರ ಯೋಜನಾ ಪ್ರಾಧಿಕಾರ, ನಿಗಮ ಮತ್ತು ಮಂಡಳಿಗಳಲ್ಲಿ ಸರ್ಕಾರದ ಅನುದಾನದಿಂದ ಕೈಗೊಳ್ಳುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಭಾವಚಿತ್ರಗಳೊಂದಿಗೆ ಜಾಹೀರಾತು ಪ್ರದರ್ಶಿಸುವುದನ್ನು ನಿಷೇಧಿಸಿ ನಗರಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸರ್ಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಗಳು ಮತ್ತು ಸಾರ್ವಜನಿಕ ಕೆಲಸಗಳಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಜನಪ್ರತಿನಿಧಿಗಳ ಭಾವಚಿತ್ರ ಪ್ರದರ್ಶಿಸುವುದನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಎಚ್.ಎಂ. ವೆಂಕಟೇಶ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದೇ ವಿಚಾರದಲ್ಲಿ ಸುಪ್ರೀಂಕೋರ್ಟ್ 2015ರಲ್ಲಿ ಹೊರಡಿಸುವ ಆದೇಶ ಪಾಲನೆಗೆ ನಿರ್ದೇಶನ ನೀಡುವಂತೆ ಕೋರಿದ್ದರು.ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರಿ ವೆಚ್ಚದಲ್ಲಿ ನಡೆಯುವ ಕಾಮಗಾರಿಗಳು ಮತ್ತು ಕೆಲಸಗಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಭಾವಚಿತ್ರಗಳೊಂದಿಗೆ ಹಾಕಿರುವ ಜಾಹೀರಾತುಗಳ ತೆರವಿಗೆ ಆದೇಶ ಹೊರಡಿಸುವಂತೆ ಇದೇ 6ರಂದು ನಿರ್ದೇಶನ ನೀಡಿತ್ತು. ಇದೇ 24ರಂದು ಸುತ್ತೋಲೆ ಹೊರಡಿಸಿರುವ ನಗರಾಭಿವೃದ್ಧಿ ಇಲಾಖೆ, ಅಂತಹ ಎಲ್ಲ ಜಾಹೀರಾತುಗಳನ್ನು ತಕ್ಷಣ ತೆರವುಗೊಳಿಸುವಂತೆ ಆದೇಶಿಸಿದೆ.
ಮುಂದೆ ಇಂತಹ ಯಾವುದೇ ಜಾಹೀರಾತು ಪ್ರದರ್ಶಿಸದಂತೆ ಕ್ರಮ ವಹಿಸಬೇಕು. ಇಂತಹ ಪ್ರಕರಣಗಳು ಮರುಕಳಿಸಿದಲ್ಲಿ ಸಂಬಂಧಿಸಿದವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈ ಆದೇಶ ಅನುಷ್ಠಾನಗೊಳಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು‘ ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.