ಬೆಂಗಳೂರು: ಕರ್ನಾಟಕವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿಗೆ ಇಲ್ಲಿಯ ಸುಸಜ್ಜಿತ ಹೆದ್ದಾರಿಗಳು ಮತ್ತು ಹೆಚ್ಚಿನ ಮೂಲಸೌಲಭ್ಯಗಳು ಕಾರಣ ಎಂದು ಬಿಹಾರದ ರಸ್ತೆ ನಿರ್ಮಾಣ ಇಲಾಖೆಯ ಸಚಿವರಾದ ನಿತಿನ್ ನಬಿನ್ ಅವರು ಪ್ರಶಂಸಿಸಿದರು.
ವಿಕಾಸಸೌಧದಲ್ಲಿ ಇಂದು ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಕೈಗೊಳ್ಳುತ್ತಿರುವ ಹೆದ್ದಾರಿ ಮತ್ತು ರಸ್ತೆ ನಿರ್ಮಾಣಗಳ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡ ಬಳಿಕ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕರ್ನಾಟಕದಲ್ಲಿ ಮೂಲೆಮೂಲೆಗಳಿಗೂ ಅಳವಡಿಸಿರುವ ರಸ್ತೆ ಸಂಪರ್ಕವು ಇಡೀ ದೇಶದಲ್ಲೇ ಮಾದರಿಯಾಗಿದೆ. ಕರ್ನಾಟಕದ ಸಂಪರ್ಕ ಕ್ರಾಂತಿಯಲ್ಲಿ ಕೈಗೊಳ್ಳಲಾಗಿರುವ ಈ ಉತ್ತಮ ಸಾಧನೆಗಳ ಅಂಶಗಳನ್ನು ಬಿಹಾರವು ಭವಿಷ್ಯದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿ ಮತ್ತು ಇತರ ರಸ್ತೆಗಳ ನಿರ್ವಹಣೆಯ ಕುರಿತು ಲೋಕೋಪಯೋಗಿ ಸಚಿವರಾದ ಸಿ. ಸಿ. ಪಾಟೀಲರು ವಿವರಿಸಿ, ಹೆದ್ದಾರಿ ಮತ್ತು ರಸ್ತೆಗಳ ನಿರ್ಮಾಣದಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವ ಆಧುನಿಕ ತಂತ್ರಜ್ಞಾನಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.
ಕರ್ನಾಟಕದಲ್ಲಿ ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ರಸ್ತೆಗಳ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಲಾಗಿದೆ. ರಸ್ತೆಗಳ ನಿರ್ವಹಣೆಯಲ್ಲಿ ವಾಹನಗಳ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ ಎಂದು ಸಿ.ಸಿ. ಪಾಟೀಲರು ವಿವರಿಸಿದರು.
ವಿಶ್ವಬ್ಯಾಂಕ್ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ನಮ್ಮ ರಾಜ್ಯ ಸರ್ಕಾರವು ಕೈಗೊಂಡಿರುವ ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಹಾಗೂ ಕರ್ನಾಟಕದ ರಸ್ತೆ ಮತ್ತು ಹೆದ್ದಾರಿಗಳ ಸಂಪರ್ಕಜಾಲದ ನಿರ್ಮಾಣ ಮತ್ತು ನಿರ್ವಹಣೆಯ ಬಗ್ಗೆ ಬಿಹಾರದ ಸಚಿವರಿಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ರೆಡ್ಡಿ ಅವರು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿ ವಿವರಿಸಿದರು.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಶ್ರೀ ಗುರುಪ್ರಸಾದ್, ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಗೋವಿಂದರಾಜು ಅವರೂ ಸೇರಿದಂತೆ ಉಭಯ ರಾಜ್ಯಗಳ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.