ನವದೆಹಲಿ: ಛತ್ತೀಸ್ ಗಡದ ಕಾಂಗ್ರೆಸ್ ವಲಯದಲ್ಲಿ ತಲೆದೋರಿರುವ ಆಂತರಿಕ ಬಿಕ್ಕಟ್ಟನ್ನು ಶಮನಗೊಳಿಸುವ ಸಲುವಾಗಿ ಮುಖ್ಯಮಂತಿ ಭೂಪೇಶ್ ಬಾಗೇಲ್ ಅವರು ರಾಹುಲ್ ಗಾಂಧಿಯನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿದರು. ಇದು ಮುಖ್ಯಮಂತ್ರಿಯವರ ಈ ವಾರದ ಎರಡನೇ ಭೇಟಿಯಾಗಿದೆ. ಈ ಸಂಬಂಧ ರಾಹುಲ್ ಗಾಂಧಿಯವರು ಕಾಂಗ್ರೆಸ್ಸಿನ ಎಲ್ಲಾ ಶಾಸಕರನ್ನು ತುರ್ತಾಗಿ ದೆಹಲಿಗೆ ಕರೆಸಿದ್ದಾರೆ.
ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಮತ್ತು ಸಚಿವರಾದ ಟಿ.ಎಸ್. ಸಿಂಗ್ ದಿಯೊ ಅವರ ನಡುವೆ ನಡೆಯುತ್ತಿರುವ ಆಂತರಿಕ ಕಲಹದಿಂದಾಗಿ ಬಾಗೇಲ್ ಅವರ ಮುಖ್ಯಮಂತ್ರಿ ಹುದ್ದೆಗೆ ಅಪಾಯ ತಂದೊಡ್ಡುವ ಸಾಧ್ಯತೆಯಿರುವುದರಿಂದ ರಾಹುಲ್ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
2018 ರಲ್ಲಿ ಏರ್ಪಟ್ಟ ಪಕ್ಷದ ಆಂತರಿಕ ಒಪ್ಪಂದದಂತೆ ಉಳಿದ 2.5 ವರ್ಷದ ಅವಧಿಗೆ ನನ್ನ ಮುಖ್ಯಮಂತ್ರಿ ಹುದ್ದೆಗೇರಲು ಅವಕಾಶ ನೀಡುವಂತೆ ಸಿಂಗ್ ದಿಯೊ ಅವರು ಪಕ್ಷದ ವರಿಷ್ಠರಿಗೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಛತ್ತೀಸ್ ಗಡ ಕಾಂಗ್ರೆಸ್ ಆಂತರಿಕ ಬಿಕ್ಕಟ್ಟು ತಲೆದೋರಿತ್ತು. ಮುಖ್ಯಮಂತ್ರಿ ಬಾಗೇಲ್ ಅವರ ಸರ್ಕಾರವು ಜೂನ್ ನಲ್ಲಿ ಎರಡೂವರೆ ವರ್ಷವನ್ನು ಪೂರ್ಣಗೊಳಿಸಿದೆ. ಈ ನಿಟ್ಟಿನಲ್ಲಿ ಪಕ್ಷ ನೀಡಿದ ಭರವಸೆಯನ್ನು ಪಾಲಿಸುವಂತೆ ವರಿಷ್ಠರಿಗೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ವರಿಷ್ಠರು ಇಕ್ಕಟ್ಟಿಗೆ ಸಿಲುಕಿದ್ದರು. ಮಾತ್ರವಲ್ಲದೆ ಪಕ್ಷವು ಅಧಿಕೃತವಾಗಿ ಯಾವುದೇ ತೀರ್ಮಾನವನ್ನು ಬಹಿರಂಗಪಡಿಸಿರಲಿಲ್ಲ.
ಆಂತರಿಕ ಬಿಕ್ಕಟ್ಟನ್ನು ಸರಿದೂಗಿಸುವ ನಿಟ್ಟಿನಲ್ಲಿ ಬಾಗೇಲ್ ಮತ್ತು ಸಿಂಗ್ ದಿಯೋ ಅವರು ಮಂಗಳವಾರ ರಾಹುಲ್ ಗಾಂಧಿಯನ್ನು ಭೇಟಿಯಾದರು. ಮಾತ್ರವಲ್ಲ ಈ ಸಂಬಂಧ ಬಾಗೇಲ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆಯೆಂದು ಹೇಳಲಾಗುತ್ತಿದೆ. ಅದೇ ರೀತಿ ನಾಯಕತ್ವ ಬದಲಾವಣೆಯ ವಿಷಯದಲ್ಲಿ ಪಕ್ಷದ ಯಾವುದೇ ನಿರ್ಧಾರಕ್ಕೆ ಬದ್ಧವಿರುವುದಾಗಿ ಬಾಗೇಲ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಮಂಗಳವಾರ ನಡೆದ ಚರ್ಚೆಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ನಾಯಕತ್ವದ ಬಿಕ್ಕಟ್ಟಿನ ಕುರಿತು ಯಾವುದೇ ಚರ್ಚೆ ನಡೆಸಿಲ್ಲವೆಂದು ಕಾಂಗ್ರೆಸ್ ನ ಛತ್ತೀಸ್ ಗಡದ ಉಸ್ತುವಾರಿ ಪಿ.ಎಲ್ ಪುನಿಯಾ ತಿಳಿಸಿದ್ದಾರೆ.