ಬೆಂಗಳೂರು: ಸರ್ವೋಚ್ಛ ನ್ಯಾಯಾಲಯದಲ್ಲಿ ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಜಲ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕಾನೂನು ಮತ್ತು ತಾಂತ್ರಿಕ ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆದಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸ ಲಾಗಿದೆ ಎಂದರು.
ವಿಶೇಷ ರಜೆ ಅರ್ಜಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥ ಮಾಡಲು ತೀರ್ಮಾನಿಸಲಾಗಿದೆ ಎಂದ ಅವರು ತಮಿಳುನಾಡು ನದಿ ಜೋಡಣೆ ಯೋಜನೆಗಳು ಕಾನೂನು ಬಾಹಿರವಾಗಿದ್ದು, ಆ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ನಮ್ಮ ನಿಲುವನ್ನು ಸ್ಪಷ್ಟಪಡಿಸುವ ಕುರಿತು ಹಾಗೂ ತಮಿಳುನಾಡು ಮಧುರೈ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿದೆ. ಪ್ರಕರಣ ಮಧುರೈ ವ್ಯಾಪ್ತಿಗೆ ಒಳಪಡದಿರುವುದರಿಂದ ಪ್ರಕರಣವನ್ನು ಕೈಬಿಡಲು ಕ್ರಮ ವಹಿಸಲಾಗುವುದು ಎಂದರು.
ನೀರಾವರಿ ಯೋಜನೆ ಅನುಷ್ಠಾನ ವಿಚಾರದಲ್ಲಿ ರಾಜ್ಯಕ್ಕೆ ಸಮರ್ಥ ನ್ಯಾಯ ದೊರಕಿಸಿ ಕೊಡುವಂತೆ ವಕೀಲರ ತಂಡಕ್ಕೆ ಸ್ಪಷ್ಟಪಡಿಸಲಾಗಿದೆ. ಕೃಷ್ಣಾ, ಕಾವೇರಿ, ಮಹದಾಯಿ ಮತ್ತು ಮೇಕೆದಾಟು ಯೋಜನೆ ಸೇರಿದಂತೆ ರಾಜ್ಯದ ನಿಲುವನ್ನು ಸಮರ್ಥವಾಗಿ ನ್ಯಾಯಾಲಯದಲ್ಲಿ ಮಂಡಿಸಿ, ನ್ಯಾಯ ದೊರಕಿಸಿ ಕೊಡುವಂತೆ ವಕೀಲರ ತಂಡಕ್ಕೆ ಸೂಚನೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಡಾ. ಕೆ. ಸುಧಾಕರ್, ಸಂಸದ ಶಿವಕುಮಾರ ಉದಾಸಿ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮತ್ತಿತರರು ಪಾಲ್ಗೊಂಡಿದ್ದರರು.
ಈ ಮಧ್ಯೆ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ಕೋವಿಡ್ ಲಸಿಕೆ ಪೂರೈಸುವಂತೆ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಮನವಿ ಮಾಡಿರುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕ ಮತ್ತು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ, ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಡಾ. ಕೆ. ಸುಧಾಕರ್, ಸಂಸದ ಶಿವಕುಮಾರ ಉದಾಸಿ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಜರಿದ್ದರು.