ನಕಲಿ ದಾಳಿ ಹೆಣೆದ ಆರೋಪದಲ್ಲಿ ಕವಿ ಮುನವ್ವರ್ ರಾಣಾ ಅವರ ಪುತ್ರನ ಬಂಧನ

Prasthutha|

ಲಕ್ನೋ: ತನ್ನ ಮೇಲೆ ದಾಳಿ ನಡೆದಿದೆ ಎಂದು ಸುಳ್ಳು ದೂರು ನೀಡಿದ್ದ ಆರೋಪದಲ್ಲಿ ಉರ್ದು ಕವಿ ಮುನವ್ವರ್ ರಾಣಾ ಅವರ ಪುತ್ರನನ್ನು ರಾಯ್ ಬರೇಲ್ವಿ ಪೊಲೀಸರು ಬಂಧಿಸಿದ್ದಾರೆ. ತನ್ನ ಚಿಕ್ಕಪ್ಪಂದಿರನ್ನು ದಾಳಿ ಪ್ರಕರಣದಲ್ಲಿ ಸಿಲುಕಿಸಲು ತಬ್ರೇಝ್ ರಾಣಾ ಅವರು ಯತ್ನಿಸಿದ್ದರೆಂದು ಪೊಲೀಸರು ದೂರಿದ್ದಾರೆ.

- Advertisement -

ರಾಯ್ ಬರೇಲಿಯ ತಿಲೋಯ್ ಕ್ಷೇತ್ರದಿಂದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಬ್ರೇಝ್ ರಾಣಾ ಅವರು ಸ್ಪರ್ಧಿಸಲು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಭದ್ರತೆ ಮತ್ತು ಮಾಧ್ಯಮ ಪ್ರಚಾರ ಗಿಟ್ಟಿಸುವ ದುರುದ್ದೇಶದಿಂದ ತನ್ನ ಮೇಲೆ ದಾಳಿಯಾಗಿದೆಯೆಂಬ ಕಟ್ಟುಕಥೆಯನ್ನು ಹೆಣೆದಿದ್ದ. ಈ ಮೂಲಕ ತಮ್ಮ ಚಿಕ್ಕಪ್ಪರನ್ನು ದಾಳಿ ಪ್ರಕರಣದಲ್ಲಿ ಸಿಲುಕಿಸಲು ಯೋಜನೆ ರೂಪಿಸಿದ್ದನೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 28 ರಂದು ಹಿಂದೋಲಾ ರತಾಪುರ ಪ್ರದೇಶದ ಪೆಟ್ರೋಲ್ ಪಂಪ್ ನಲ್ಲಿ ತನ್ನ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಹಲ್ಲೆ ನಡೆಸಿದ್ದಾರೆಂದು ಅವರು ರಾಯ್ ಬರೇಲಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಯುಪಿ ಪೊಲೀಸರ ವಿಶೇಷ ಪಡೆ, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಅವರು ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಪೊಲೀಸರ ಗಮನಕ್ಕೆ ಬಂದಿದೆ.

- Advertisement -

ತಬ್ರೇಝ್ ತನ್ನ ವಾಹನದಲ್ಲಿ ಸ್ನೇಹಿತನೊಂದಿಗೆ ತೆರಳುತ್ತಿದ್ದಾಗ ದಾಳಿ ನಡೆದಿದೆ ಎಂದು ದೂರಿದ್ದನು. ಆದರೆ ಆತ ಏಕಾಂಗಿಯಾಗಿ ತೆರಳುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಬ್ರೇಝ್ ರಾಣಾ ತನ್ನ ಸಹಚರರಾದ ಹಲೀಮ್ ಮತ್ತು ಸುಲ್ತಾನ್ ಅಲಿ ಜೊತೆಗೂಡಿ ತನ್ನ ಮೇಲಿನ ದಾಳಿಯ ಕಟ್ಟುಕಥೆಯನ್ನು ಹೆಣೆದಿದ್ದನು ಎಂದು ರಾಯ್ ಬರೇಲಿ ಎಸ್ಪಿ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.
ಕಳೆದ ಶುಕ್ರವಾರ ಮುನವ್ವರ್ ರಾಣಾ ವಿರುದ್ಧ ರಾಮಾಯಣ ಬರೆದ ವಾಲ್ಮೀಕಿಯನ್ನು ತಾಲಿಬಾನ್ ಜೊತೆ ಹೋಲಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಈ ಮಧ್ಯೆ ತನ್ನ ಮಗನನ್ನು ರಾಜ್ಯ ಸರ್ಕಾರ ಗುರಿಯಾಗಿಸಿದೆಯೆಂದು ಮುನವ್ವರ್ ರಾಣಾ ಆರೋಪಿಸಿದ್ದಾರೆ. ಮಾತ್ರವಲ್ಲ ರಾಜ್ಯ ಸರ್ಕಾರ ಪ್ರತಿಯೊಬ್ಬ ಮುಸ್ಲಿಮರನ್ನು ಭಯೋತ್ಪಾದಕರಂತೆ ಚಿತ್ರೀಕರಿಸುತ್ತಿದೆಯೆಂದು ಅವರು ಆರೋಪಿಸಿದ್ದಾರೆ.



Join Whatsapp