ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರವಾಗಿ ನಡೆದಿರುವ ಕೊಲೆ ಮತ್ತು ಮಹಿಳೆಯರ ಮೇಲಿನ ಅಪರಾಧಗಳ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಕೊಲ್ಕತ್ತಾ ಹೈಕೋರ್ಟ್ ಗುರುವಾರ ಆದೇಶಿಸಿದೆ. ಚುನಾವಣೋತ್ತರವಾಗಿ ನಡೆದ ಇತರೆ ಗಲಭೆ ಪ್ರಕರಣ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಲಿದೆ. ಉಭಯ ಸಂಸ್ಥೆಗಳು ನಡೆಸುವ ತನಿಖೆಯ ಮೇಲೆ ಹೈಕೋರ್ಟ್ ನಿಗಾ ಇಡಲಿದೆ ಎಂದು ಪೀಠ ಹೇಳಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿಗಳಾದ ಐ ಪಿ ಮುಖರ್ಜಿ, ಹರೀಶ್ ಟಂಡನ್, ಸೌಮೇನ್ ಸೇನ್ ಮತ್ತು ಸುಬ್ರತಾ ತಾಲೂಕ್ದಾರ್ ಅವರನ್ನು ಒಳಗೊಂಡ ಪಂಚ ಪೀಠವು ಮೂರು ಪ್ರತ್ಯೇಕ ಆದರೆ ಸಹಮತದ ತೀರ್ಪು ಪ್ರಕಟಿಸಿದೆ.“ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಎಚ್ ಆರ್ ಸಿ) ರಚಿಸಿದ್ದ ಸಮಿತಿ ವರದಿಯಲ್ಲಿ ಕೊಲೆ, ಮಹಿಳೆಯರ ಅತ್ಯಾಚಾರ, ಅತ್ಯಾಚಾರ ಯತ್ನ ಆರೋಪದ ಕುರಿತು ಉಲ್ಲೇಖಿಸಲಾಗಿದ್ದು, ಅವುಗಳನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
“ಈ ಸಂಬಂಧದ ಎಲ್ಲಾ ದಾಖಲೆಗಳನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಬೇಕು. ತನಿಖೆಯ ಮೇಲೆ ನ್ಯಾಯಾಲಯ ನಿಗಾ ಇಡಲಿದ್ದು, ಯಾರಾದರೂ ತನಿಖೆಗೆ ಅಡ್ಡಿಪಡಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ನ್ಯಾಯಾಲಯ ಹೇಳಿದೆ.
ಎನ್‌ಎಚ್‌ಆರ್‌ಸಿ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿರುವ ಇತರೆ ಪ್ರಕರಣಗಳನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ತನಿಖೆಗಾಗಿ ವರ್ಗಾಯಿಸಿರುವ ನ್ಯಾಯಾಲಯವು ಅದರ ಮೇಲೂ ನಿಗಾ ಇಡಲಾಗುವುದು ಎಂದಿದೆ.
ಪಶ್ಚಿಮ ಬಂಗಾಳ ವೃಂದದ ಐಪಿಎಸ್ ಅಧಿಕಾರಿಗಳಾದ ಸುಮನ್ ಬಾಲಾ ಸಾಹೂ, ಸೌಮೇನ್ ಮಿತ್ರಾ ಮತ್ತು ರಣ್ವೀರ್ ಕುಮಾರ್ ಅವರನ್ನು ಎಸ್‌ಐಟಿ ತಂಡ ಒಳಗೊಂಡಿದೆ. ಎಸ್‌ಐಟಿ ತನಿಖೆಯ ಮೇಲೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಿಗಾ ಇಡಲಿದ್ದು, ಈ ಸಂಬಂಧ ನ್ಯಾಯಾಧೀಶರ ಒಪ್ಪಿಗೆ ಪಡೆದು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಪೀಠ ಹೇಳಿದೆ.
ದಕ್ಷಿಣ ಉಪನಗರ ಡಿಸಿಪಿ ರಶೀದ್ ಮುನೀರ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಏಕೆ ಆರಂಭಿಸಬಾರದು ಎಂದು ಜುಲೈ 2ರಂದು ಜಾರಿ ಮಾಡಲಾಗಿರುವ ಷೋಕಾಸ್ ನೋಟಿಸ್ ಕುರಿತು ಆನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ರಾಜ್ಯ ಸರ್ಕಾರದ ಎಲ್ಲಾ ಸಂಸ್ಥೆಗಳು ಸಿಬಿಐ ಮತ್ತು ಎಸ್‌ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದ್ದು, ಎನ್‌ಎಚ್‌ಆರ್‌ಸಿ ಸಮಿತಿ ವರದಿಯಲ್ಲಿನ ಇತರೆ ವಿಚಾರಗಳು ಮತ್ತು ಪ್ರಕ್ರಿಯೆಯ ಕುರಿತು ನಿರ್ಧರಿಸಲು ಪ್ರಕರಣವನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಗುವುದು ಎಂದಿದ್ದು, ಪ್ರಕರಣವನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ.
(ಕೃಪೆ: ಬಾರ್ ಆ್ಯಂಡ್ ಬೆಂಚ್)