ಸಾವರ್ಕರ್ ಫೋಟೋಗೆ ಆಕ್ಷೇಪಿಸಿ ಜಾಥಾಕ್ಕೆ ಅಡ್ಡಿ: ಮೂವರಿಗೆ ಜಾಮೀನು

Prasthutha|

ಪುತ್ತೂರು: ಸ್ವಾತಂತ್ರ್ಯೋತ್ಸವ ದಿನದಂದು ಕಬಕ ಗ್ರಾಮ ಪಂಚಾಯತ್ ನಲ್ಲಿ ಹಮ್ಮಿಕೊಂಡಿದ್ದ ವಾಹನ ಜಾಥಾದಲ್ಲಿ ಸಾವರ್ಕರ್ ಫೋಟೋ ಇದ್ದುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಾಥಕ್ಕೆ ತಡೆವೊಡ್ಡಿದ್ದ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಮಂಗಳವಾರ ಜಾಮೀನು ನೀಡಿ ಬಿಡುಗಡೆ ಮಾಡಿದೆ.

- Advertisement -


ವಿದ್ಯಾಪುರ ನಿವಾಸಿ ಕೆ.ಅಝೀಝ್, ಮುರ ನಿವಾಸಿ ಶಮೀರ್ ಹಾಗೂ ಕೊಡಿಪ್ಪಾಡಿ ನಿವಾಸಿ ಅಬ್ದುಲ್ ರಹಿಮಾನ್ ಅವರಿಗೆ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ. ವಕೀಲರಾದ ಅಶ್ರಫ್ ಅಗ್ನಾಡಿ, ಮಜೀದ್ ಖಾನ್, ಅಬ್ದುಲ್ ರಹ್ಮಾನ್, ಮುಸ್ತಫಾ ವಾದಿಸಿದ್ದರು.


ಘಟನೆಯ ವಿವರ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪುತ್ತೂರಿನ ಕಬಕ ಗ್ರಾಮ ಪಂಚಾಯತ್ ನಲ್ಲಿ ವಾಹನ ಜಾಥ ಏರ್ಪಡಿಸಲಾಗಿತ್ತು. ಜಾಥಾದ ವಾಹನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋದ ಮಧ್ಯದಲ್ಲಿ ಸಾವರ್ಕರ್ ಫೋಟೋ ಕೂಡ ಕಂಡುಬಂದಿದ್ದರಿಂದ ಸ್ಥಳೀಯ ಎಸ್ ಡಿಪಿಐನ ಸದಸ್ಯರು ಮತ್ತು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ವಾಹನಕ್ಕೆ ತಡೆವೊಡ್ಡಿದ್ದರು. ಮಾತ್ರವಲ್ಲ ಸಾವರ್ಕರ್ ಫೋಟೋ ತೆಗೆಯುವಂತೆ ಒತ್ತಾಯಿಸಿದ್ದರು.

- Advertisement -


ಈ ವೇಳೆ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಪೊಲೀಸರು ಧಾವಿಸಿ ಉಭಯ ಕಡೆಯವರನ್ನು ಸಮಾಧಾನ ಪಡಿಸಿ ವಾಹನ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದರು.
ಬಳಿಕ ಸಾವರ್ಕರ್ ಭಾವಚಿತ್ರ ಅಳವಡಿಸುವ ಮೂಲಕ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಲಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಎಸ್ ಡಿಪಿಐ ಮುಖಂಡರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ಮಧ್ಯೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಎಂಬವರು ಕೂಡ ವಾಹನ ಜಾಥಾಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದರು.


ಆರೋಪಿಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಕೋವಿಡ್ 19 ರ ನಿಯಾಮವಳಿಯನ್ನು ಉಲ್ಲಂಘಿಸಿ 75ರ ಸ್ವಾತಂತ್ರ್ಯೋತ್ಸವವನ್ನು ಆಚರಿಸದಂತೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪಂಚಾಯತ್ ಅಧ್ಯಕ್ಷರನ್ನು ಕೈಯಿಂದ ದೂಡಿ, ಭಾರತ ಮಾತೆಯ ಭಾವಚಿತ್ರವನ್ನು ಹಾನಿಗೊಳಿಸಿ, ಸಾರ್ವಜನಿಕ ಆಸ್ತಿಗೆ ಹಾನಿಯನ್ನು ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಪೊಲೀಸರು ಅಝೀಝ್, ನೌಷಾದ್, ಶಮೀರ್, ಹಾರೀಸ್, ಅದ್ದು, ತೌಸೀಫ್, ಶಾಫಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿ, ಕೆ.ಅಝೀಝ್, ಶಮೀರ್ ಹಾಗೂ ನಿವಾಸಿ ಅಬ್ದುಲ್ ರಹಿಮಾನ್ ಅವರನ್ನು ಬಂಧಿಸಿದ್ದರು. ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.



Join Whatsapp