ಬೆಂಗಳೂರು: ಬಿಜೆಪಿ ಶಾಸಕನ ಪ್ರತಿಭಟನೆಗೆ ಮಣಿದ ಸರ್ಕಾರ ಕೊನೆಗೂ ಪ್ರವಾಹ ಪೀಡಿತ ತಾಲೂಕು ಪಟ್ಟಿಗೆ ಮೂಡಿಗೆರೆ ತಾಲೂಕನ್ನು ಸೇರ್ಪಡೆಗೊಳಿಸಿದೆ.
ಕಳೆದ ವಾರ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಗೆ ಮೂಡಿಗೆರೆ ತಾಲೂಕನ್ನು ಸೇರಿಸಿಲ್ಲ ಎಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದರು.
ಆ ವೇಳೆ ಕಂದಾಯ ಸಚಿವ ಆರ್.ಅಶೋಕ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.
ಇದೀಗ ಹೊಸದಾಗಿ 22 ಹೆಚ್ಚುವರಿ ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲಾಗಿದ್ದು, ಅದರಲ್ಲಿ ಮೂಡಿಗೆರೆ ತಾಲೂಕನ್ನು ಸೇರ್ಪಡೆಗೊಳಿಸಲಾಗಿದೆ.
ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, 61 ತಾಲೂಕುಗಳು ಪ್ರವಾಹ ಪೀಡಿತವೆಂದು ಈ ಘೋಷಣೆ ಮಾಡಲಾಗಿತ್ತು. ಮಳೆ ಹೆಚ್ಚಾಗಿ ಮತ್ತೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ 22 ತಾಲೂಕು ಪ್ರವಾಹ ಪೀಡಿತವೆಂದು ಘೋಷಣೆ ಮಾಡಲಾಗಿದೆ ಎಂದರು.
ಬೆಳಗಾವಿ, ಚಿಕ್ಕಮಗಳೂರು, ಹೆಬ್ಬಳ್ಳಿ ನಗರ, ಕಡೂರು, ದಾವಣಗೆರೆ, ದಾಂಡೇಲಿ, ಆಲೂರು, ಲಕ್ಷ್ಮೇಶ್ವರ, ತರೀಕೆರೆ, ಮುಂಡಗೋಡು, ಸೂಪ, ಹುಬ್ಬಳ್ಳಿ, ಭದ್ರಾವತಿ, ಚೆನ್ನಗಿರಿ, ಅಣ್ಣಿಗೇರಿ, ಬಬಲೇಶ್ವರ, ನಿಡಗುಂದಿ, ಕೋಲ್ಹಾರ, ಮುದ್ದೆಬಿಹಾಳ, ಹರಪನಹಳ್ಳಿ, ಹೊಸನಗರ, ಮೂಡಿಗೆರೆ ತಾಲೂಕನ್ನು ಹೊಸದಾಗಿ ಪ್ರವಾಹ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ ಎಂದು ವಿವರಿಸಿದರು.
ಬೆಂಗಳೂರಿನಲ್ಲೂ 50ಕ್ಕೂ ಹೆಚ್ಚು ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಅಧಿಕಾರಿಗಳಿಗೆ ಇದರ ಬಗ್ಗೆ ಸೂಚನೆ ನೀಡಿದ್ದೇವೆ. ನೀರು ನಿಲ್ಲುವ ಡ್ರೈನ್ ಬಗ್ಗೆ ತುರ್ತು ಕಾಮಗಾರಿ ನಡೆಸಲು ಸೂಚಿಸಿದ್ದೇನೆ. ನೀರು ನಿಲ್ಲುವ ಜಾಗಗಳ ಬಗ್ಗೆ ಮಾಹಿತಿ ಕೇಳಿದ್ದೇನೆ. ತುರ್ತು ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಸೂಚಿಸಿದ್ದೇನೆ ಎಂದರು.
ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಕಳಪೆ ಕಾಮಗಾರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಲರಿಂಗ್ ಮಾಡುವುದು ಸರಿಯಾಗಿಲ್ಲ. ಅದನ್ನು ಸರಿ ಪಡಿಸುವಂತೆ ಸೂಚನೆ ನೀಡಲಾಗಿದೆ. ಕಳಪೆ ಕಾಮಗಾರಿ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ಒಂದು ವೇಳೆ ಸರಿಪಡಿಸಿಲ್ಲವಾದರೆ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅದರ ಜೊತೆಗೆ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದರು.