ಲಂಡನ್: ಲಂಡನ್ನಿನ ಇಂಡಿಯಾ ಹೌಸಿನಲ್ಲಿ ಇಲ್ಲಿನ ಭಾರತ ನಿವಾಸಿಗಳು ಮೋದಿ ರಾಜೀನಾಮೆ ಕೊಡಿ
ಎಂಬ ಬ್ಯಾನರ್ ಹಾರಿಸಿ, ಮೇಣದ ಬತ್ತಿಗಳನ್ನು ಉರಿಸಿ ಭಾರತದ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದರು. ಅನಂತರ ಮೋದಿ ರಾಜೀನಾಮೆ ಕೋರಿದ ಬ್ಯಾನರನ್ನು ಜಗತ್ಪ್ರಸಿದ್ಧ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ನಲ್ಲಿ ಪ್ರದರ್ಶಿಸಲಾಯಿತು.
ಪ್ರತಿಭಟನಕಾರರು ಬೆಳಿಗ್ಗೆ 4 ಗಂಟೆಗೆ ಬ್ಯಾನರ್ ಹಾರಿಸಿ, ಒಂದು ಗಂಟೆಗಳಷ್ಟು ಕಾಲ ಅಲ್ಲಿದ್ದರು. ಅನಂತರ ಬ್ರಿಟಿಷ್ ಪಾರ್ಲಿಮೆಂಟಿಗೆ ಎದುರುಗಡೆ ಇರುವ ವೆಸ್ಟ್ ಮಿನಿಸ್ಟರ್ ಸೇತುವೆಗೆ ತೆರಳಿ ಅಲ್ಲಿ ಬ್ಯಾನರ್ ಪ್ರದರ್ಶಿಸಿದರು.
ಈ ಕಾರ್ಯಕ್ರಮವನ್ನು ಮಾನವ ಹಕ್ಕುಗಳಿಗಾಗಿ ಇರುವ ಎಸ್ ಎ ಎಸ್ ಜಿ- ಸೌತ್ ಏಶಿಯಾ ಸಾಲಿಡಾರಿಟಿ ಗ್ರೂಪ್ ಆಯೋಜಿಸಿತ್ತು. ಮೋದಿ ರಾಜೀನಾಮೆ ಏಕೆ ಎಂಬುದಕ್ಕೆ ಕಾರಣ ಮತ್ತು ಬೇಡಿಕೆಗಳನ್ನು ಅವರು ಪ್ರಕಟಿಸಿದ್ದಾರೆ.
1 ಮುಸ್ಲಿಮರ ಜನಾಂಗೀಯ ಹತ್ಯೆ ನಿಲ್ಲಿಸಿ; ಹಿಂದುತ್ವ ಧೋರಣೆಯ ಉಗ್ರ ಗುಂಪುಗಳು ಮುಸ್ಲಿಮ್ ಜನಾಂಗ ಮತ್ತು ಅವರ ನಂಬಿಕೆಗಳ ವಿರುದ್ಧ ಹತ್ಯಾ ಮನೋಭಾವ ಹೊಂದಿರುವುದನ್ನು ನಿಲ್ಲಿಸಿ. ಇವನ್ನೆಲ್ಲ ಪೂರ್ತಿ ತೊಡೆದು ಸಾಮಾನ್ಯ ಬದುಕು ಮರುಕಳಿಸುವಂತೆ ಮಾಡಿ.
2 ದಲಿತ ಮಹಿಳೆ ಮತ್ತು ಹುಡುಗಿಯರ ಮಾನಭಂಗ ಮತ್ತು ಕೊಲೆ; ನರೇಂದ್ರ ಮೋದಿ ಆಡಳಿತದಲ್ಲಿ ದಲಿತರ ಮೇಲೆ ಹಲ್ಲೆ, ದಲಿತ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಯ ಪ್ರಮಾಣ ಹಲವು ಪಟ್ಟು ಹೆಚ್ಚಾಗಿದೆ. ಬಿಜೆಪಿ ಪರ ಮೇಲ್ಜಾತಿ ವ್ಯಕ್ತಿಗಳು ದಲಿತರ ಬದುಕನ್ನು ಶೋಚನೀಯ ಸ್ಥಿತಿಯಲ್ಲೇ ಇಡಲು ಈಗಲೂ ಬಯಸುತ್ತಾರೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇದು ಅಧಿಕವಿದ್ದು, ಪ್ರಧಾನಿಯವರು ಈ ಬಗ್ಗೆ ಮೌನ ವಹಿಸಿದ್ದು, ಇವರ ಹಿಂದು ಸ್ತ್ರೀದ್ವೇಷ ಮನೋಭಾವ ತೊಲಗಬೇಕು.
3 ಕಾರ್ಪೊರೇಟ್ ವಶಕ್ಕೆ ಕೃಷಿ; ಮೋದಿ ಸರಕಾರವು ಮೂರು ಕೃಷಿ ಕಾಯ್ದೆಗಳನ್ನು ತಂದಿದ್ದು, ಅದು ಬೇಸಾಯವನ್ನು ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿಯವರ ಹಿಡಿತಕ್ಕೆ ಒಪ್ಪಿಸಲು ಉದ್ದೇಶ ಹೊಂದಿದೆ. ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಿರಿ.
4 ಭಿನ್ನಮತೀಯರು ಮತ್ತು ಮಾನವ ಹಕ್ಕು ಹೋರಾಟಗಾರರಿಗೆ ಜೈಲು: ಯುಎಪಿಎ ಮಾದರಿಯ ಕಠಿಣ ಕಾಯ್ದೆಗಳ ಮೂಲಕ ಭಿನ್ನ ಮತ್ತು ಮಾನವ ಹಕ್ಕು ಪರ ಧ್ವನಿ ಅಡಗಿಸುವುದು ನಿಲ್ಲಲಿ.
5 ಕಾಶ್ಮೀರದಲ್ಲಿ ವಸಾಹತುಶಾಹಿ; ಕಾಶ್ಮೀರಿಗಳಿಗೆ ಸ್ವಯಂ ಆಡಳಿತದ ಹಕ್ಕು ನೀಡದೆ ದಶಕಗಳಿಂದ ಮಿಲಿಟರಿ ದಮನ ನೀತಿ ಮತ್ತು ಮಾನವ ಹಕ್ಕು ಹರಣದ ಮೂಲಕ ಅವರ ಬದುಕನ್ನು ನರಕ ಮಾಡಲಾಗಿದೆ. ಮೋದಿ ಆಡಳಿತಾವಧಿಯಲ್ಲಿ ಕಾಶ್ಮೀರವನ್ನು ಇಸ್ರೇಲ್ ಆಕ್ರಮಣಶೀಲತೆ ಮಾದರಿಯ ವಸಾಹತುಶಾಹಿಗೆ ದೂಡಲಾಗಿದೆ.
6 ಮೋದಿಯವರ ನ್ಯೂರೆಂಬರ್ಗ್ ಕಾನೂನುಗಳು; ಸಿಎಎ- ಸಿಟಿಜನ್ ಶಿಪ್ ಅಮೆಂಡ್ ಮೆಂಟ್ ಕಾಯ್ದೆ ಮೂಲಕ ಭಾರತೀಯ ನಾಗರಿಕ ಹಕ್ಕುಗಳ ಮೇಲೆ ದಾಳಿ ನಡೆದಿದೆ.
7 ಪರಿಸರ ನಿರ್ವಹಣೆಯಲ್ಲಿ ಭಾರತವು ಜಗತ್ತಿನ ನಾಲ್ಕನೆಯ ಅತಿ ನಿಕೃಷ್ಟ ದೇಶವಾಗಿದೆ.
8 ಪ್ರಜಾಸತ್ತಾತ್ಮಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಮುಸ್ಲಿಮರನ್ನು ಬಲಿ ಪಶು ಮಾಡಲು ಮತ್ತು ಹಿಂಸಾಚಾರಕ್ಕಾಗಿ ಚುನಾವಣೆಯ ದುರ್ಬಳಕೆ.
9 ಕೋವಿಡ್ 19 ಸಾಂಕ್ರಾಮಿಕದ ಅಪರಾಧಿ ಮಾದರಿಯ ತೀವ್ರ ತಪ್ಪು ನಿರ್ವಹಣೆ.
10 ತೀವ್ರ ಬಲಪಂಥೀಯವಾದಿ ಪರಮಾಧಿಕಾರ ನೀತಿಯ ಪ್ರೀತಿ ಪಟೇಲ್, ರಿಷಿ ಸುನಕ್ ಅವರೆಲ್ಲ ನಮ್ಮ ಜೊತೆ ಮಾತನಾಡುವುದಿಲ್ಲ!