ಉತ್ತರ ಪ್ರದೇಶ : ಗೋಹತ್ಯೆ ನಡೆಸಿರುವ ಕುರಿತು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್.ಎಸ್.ಎ) ಅಡಿಯಲ್ಲಿ ಮೂವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿ ಆದೇಶ ನೀಡಿದೆ. ವ್ಯಕ್ತಿಯೊಬ್ಬರ ವಸತಿ ಆವರಣದಲ್ಲಿ ಗೋಹತ್ಯೆ ಮಾಡುವುದು ಸಾರ್ವಜನಿಕ ಸಮಸ್ಯೆಯಲ್ಲವೆಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
2020 ರ ಜುಲೈನಲ್ಲಿ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಗೋಹತ್ಯೆ ಆರೋಪದಡಿಯಲ್ಲಿ ಬಂಧಿತರಾದ ಇರ್ಫಾನ್, ರಹಮತುಲ್ಲಾಹ್, ಪರ್ವೇಝ್ ಅವರ ಕುಟುಂಬ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯವು ಈ ಆದೇಶವನ್ನು ನೀಡಿದೆಯೆಂದು ಮಾಧ್ಯಮಗಳು ವರದಿ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಇರ್ಫಾನ್, ರಹಮತುಲ್ಲಾಹ್ ಮತ್ತು ಪರ್ವೇಝ್ ಎಂಬವರು ತಮ್ಮ ಮನೆಯಲ್ಲಿ ದನವನ್ನು ಮಾಂಸಕ್ಕಾಗಿ ಕತ್ತರಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಹಿಂದುತ್ವದ ಗುಂಪು ಅವರ ಮನೆಗೆ ದಾಳಿ ನಡೆಸಿ ನಂತರ ಕೋಮು ಸೌಹಾರ್ದತೆಗೆ ಧಕ್ಕೆಯಾಗಿದೆಯೆಂದು ಆರೋಪಿಸಿ ದೂರು ನೀಡಿತ್ತು. ಈ ದೂರಿನ ಆಧಾರದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.
ಈ ಎಲ್ಲಾ ವಾದಗಳನ್ನು ಆಲಿಸಿದ ನ್ಯಾಯಾಲಯವು ಆರೋಪಿಗಳು ಬಡತನ, ಉದ್ಯೋಗದ ಕೊರತೆ ಅಥವಾ ಹಸಿವಿನ ಕಾರಣದಿಂದ ತನ್ನ ಮನೆಯಲ್ಲಿ ಗೋಹತ್ಯೆ ನಡೆಸಿರುವ ಸಾಧ್ಯತೆಯಿರುವುದರಿಂದ ಈ ಪ್ರಕರಣವನ್ನು ಸಾರ್ವಜನಿಕ ಸಮಸ್ಯೆಯಾಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ತಿಳಿಸಿದೆ. ಮಾತ್ರವಲ್ಲದೆ ಈ ಪ್ರಕರಣವು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಬಾರದಿರುವುದರಿಂದ ಪ್ರಕರಣವನ್ನು ಖುಲಾಸೆಗೊಳಿಸಿ ಆರೋಪಿಗಳ ಬಿಡುಗಡೆಗೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.