ಮಂಗಳೂರು: ಕೋವಿಡ್ 2ನೇ ಅಲೆ ಕಡಿಮೆಯಾದ ನಂತರ ಈಗ ಪಾಸಿಟಿವಿ ಹೆಚ್ಚಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಇದು ಉಲ್ಬಣಗೊಂಡು ಲಾಕ್ ಡೌನ್ ಮಾಡಿ ಜನರಿಗೆ ಕಷ್ಟ ಕೊಡಲು ನಮಗೆ ಇಷ್ಟವಿಲ್ಲ. ಆದ್ದರಿಂದ ಮುನ್ನೆಚ್ಚರಿಕೆ ಕೈಗೊಳ್ಳಲು ಅಗತ್ಯ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿಯ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪರಿಸ್ಥಿತಿ ಬರದಂತೆ ತಡೆಯಲು ಗಡಿಯಲ್ಲಿ ಕೆಲವು ನಿರ್ಬಂಧ ವಿಧಿಸಲು ನಿರ್ಧರಿಸಲಾಗಿದೆ. ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಿ ಸೋಂಕು ಹರಡದಂತೆ ತಡೆಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಆರೋಗ್ಯ ಮೂಲಸೌಲಭ್ಯದಲ್ಲಿ ಕೊರತೆ ಇದ್ದರೆ ಅವುಗಳನ್ನು ತುಂಬಿ ಕೊಡಲು ಸರ್ಕಾರ ಸಿದ್ಧವಿದೆ. ಗ್ರಾಮೀಣ ಮಟ್ಟದಲ್ಲಿ ಸೋಂಕು ಪತ್ತೆ ಹಾಗೂ ಹೋಂ ಐಸೊಲೇಷನ್ ಹೆಚ್ಚಿಸಲು ಸೂಚಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಗೆ ಲಸಿಕೆ ಕೊಡಿಸಲು ಪ್ರಯತ್ನಿಸಲಾಗುವುದು. ದೆಹಲಿಗೆ ಭೇಟಿ ನೀಡಿದಾಗ ಕೇಂದ್ರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದರು.