ಜೈ ಶ್ರೀರಾಮ್ ಘೋಷಣೆ ಕೂಗಲು ಪತ್ರಕರ್ತನನ್ನು ಬಲವಂತಪಡಿಸಿದ ಹಿಂದುತ್ವವಾದಿಗಳು : ಟ್ವಿಟ್ಟರ್ ವೀಡಿಯೋ ಬಹಿರಂಗ

Prasthutha|

ನವದೆಹಲಿ : ದೆಹಲಿಯ ಜಂತರ ಮಂತರ್ ನಲ್ಲಿ ಭಾನುವಾರ ಹಿಂದುತ್ವ ತೀವ್ರವಾದಿಗಳಿಂದ ನಡೆದ ಪ್ರತಿಭಟನೆಯ ವೇಳೆ ಮುಸ್ಲಿಮ್ ವಿರೋಧಿ ಘೋಷಣೆ ಕೂಗುವ ದೃಶ್ಯವನ್ನು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಿದ ರಾಷ್ಟ್ರೀಯ ದಸ್ತಕ್ ನ ಪತ್ರಕರ್ತ ಅನ್ಮೋಲ್ ಪ್ರೀತಮ್ ಅವರನ್ನು ಹಿಂದುತ್ವವಾದಿಗಳ ಗುಂಪು ಜೈ ಶ್ರೀರಾಮ್ ಪ್ರಚೋದನಾತ್ಮಕ ಘೋಷಣೆ ಕೂಗಲು ಬಲವಂತಪಡಿಸಿದ ಘಟನೆ ವರದಿಯಾಗಿದೆ.

- Advertisement -

ಹಿಂದುತ್ವವಾದಿಗಳ ಗುಂಪು ಪತ್ರಕರ್ತರಾದ ಪ್ರೀತಮ್ ಸಿಂಗ್ ಅವರನ್ನು ಸುತ್ತುವರಿದು ಜೈ ಶ್ರೀರಾಮ್ ಕೂಗುವಂತೆ ಬಲವಂತಪಡಿಸಿದಾಗ ನಾನು ಸ್ವಇಚ್ಛೆಯಿಂದ ಆ ರೀತಿಯ ಘೋಷಣೆ ಕೂಗುತ್ತೇನೆಯೇ ಹೊರತು ಬಲವಂತ ಪಡಿಸಲು ನಿಮ್ಮಿಂದ ಸಾಧ್ಯವಿಲ್ಲವೆಂದು ಹಿಂದುತ್ವವಾದಿಗಳಿಗೆ ತಿರುಗೇಟು ನೀಡಿದರು. ಪ್ರೀತಮ್ ಸಿಂಗ್ ಅವರು ಟ್ವಿಟ್ಟರ್ ನಲ್ಲಿ ಈ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ಹಿಂದುತ್ವ ತೀವ್ರವಾದಿಗಳ ಗುಂಪು ಘೋಷಣೆ ಕೂಗಲು ಬಲವಂತ ಪಡಿಸುತ್ತಿರುವುದನ್ನು ಕಾಣಬಹುದಾಗಿದೆ.

ದೆಹಲಿ ಪ್ರತಿಭಟನೆಯ ವೇಳೆ ದ್ವೇಷಪೂರಿತ ಘೋಷಣೆಗಳನ್ನು ಪ್ರಸಾರ ಮಾಡಿದ ಹೊರತಾಗಿಯೂ ಹಿಂದುತ್ವವಾದಿಗಳು ಮುಸ್ಲಿಮ್ ವಿರೋಧಿ ಘೋಷಣೆಯನ್ನು ಮುಂದುವರಿಸಿದ್ದರು. ಮಾತ್ರವಲ್ಲದೇ ಜೈ ಶ್ರೀರಾಮ್ ಘೋಷಣೆ ಕೂಗದ ಮುಸ್ಲಿಮರನ್ನು ಕತ್ತರಿಸಿ ಕೊಲೆ ಮಾಡುವ ಬೆದರಿಕೆಯೊಡ್ಡಿದ್ದರು. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈಗಾಗಲೇ ಬಿಜಿಪಿ ನಾಯಕ ಅಶ್ವಿನಿ ಉಪಾಧ್ಯಾಯ ಸೇರಿದಂತೆ 6 ಮಂದಿ ದುಷ್ಕರ್ಮಿಗಳನ್ನು ಸೋಮವಾರ ಬಂಧಿಸಿದ್ದಾರೆ.

- Advertisement -

ಹಿಂದುತ್ವದ ಕ್ರೌರ್ಯವನ್ನು ದಿಟ್ಟತನದಿಂದ ಪ್ರತಿರೋಧಿಸಿದ್ದಕ್ಕಾಗಿ ಪ್ರೀತಮ್ ಸಿಂಗ್ ಅವರನ್ನು ಹಲವಾರು ಸಾಮಾಜಿಕ ಮಾಧ್ಯಮಗಳ ಧುರೀಣರು ಶ್ಲಾಘಿಸಿದ್ದಾರೆ. ಮಾತ್ರವಲ್ಲದೇ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ದಿಲೀಪ್ ಮಂಡಲ್ ಅವರು ಪ್ರೀತಮ್ ಅವರನ್ನು ಪ್ರತಿಕೂಲ ಸನ್ನಿವೇಶದಲ್ಲಿ ಪ್ರತಿಕ್ರಿಯಿಸುವ ಧೈರ್ಯಶಾಲಿ ಪತ್ರಕರ್ತರೆಂದು ಬಣ್ಣಿಸಿದ್ದಾರೆ.



Join Whatsapp