ದೇಶ ರಕ್ಷಣೆಗೆ ಬ್ರಿಟೀಷರ ವಿರುದ್ಧ ಹೋರಾಡಿದಂತೆ, ಬಿಜೆಪಿ ವಿರುದ್ಧವೂ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ: ಕಾಂಗ್ರೆಸ್

Prasthutha|

ಬೆಂಗಳೂರು: ‘ಬ್ರಿಟೀಷರು ಈಸ್ಟ್ ಇಂಡಿಯಾ ಕಂಪನಿ ಮೂಲಕ ದೇಶವನ್ನು ಕೊಳ್ಳೆ ಹೊಡೆದು ಭಾರತವನ್ನು ಬಡ ರಾಷ್ಟ್ರವನ್ನಾಗಿ ಮಾಡಿತ್ತು. ಅಂದು ದೇಶ ರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಿದ್ದ ನಾವು, ಇಂದು ದೇಶವನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಭಿಪ್ರಾಯಪಟ್ಟಿದೆ.

- Advertisement -

ದೇಶದ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ‘ಕ್ವಿಟ್ ಇಂಡಿಯಾ’ ಚಳುವಳಿಗೆ 75 ವರ್ಷಗಳು ಪೂರೈಸಿರುವ ಅಮೃತಮಹೋತ್ಸವದ ಸಂದರ್ಭದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್, ಮಾಜಿ ಸಚಿವರಾದ ಆರ್.ವಿ ದೇಶಪಾಂಡೆ, ಮೋಟಮ್ಮ, ಉಮಾಶ್ರೀ, ಮಾಜಿ ಸಂಸದ ಹಾಗೂ ಹಿರಿಯ ನಾಯಕ ಹನುಮಂತಯ್ಯ, ಮೇಲ್ಮನೆ ಸದಸ್ಯರಾದ ಬಿ.ಕೆ ಹರಿಪ್ರಸಾದ್, ನಜೀರ್ ಅಹ್ಮದ್, ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ‘ಇಡೀ ಸ್ವಾತಂತ್ರ್ಯ ಹೋರಾಟದ ಸಂಗ್ರಾಮದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಬಹಳ ಮಹತ್ತರವಾದ ಘಟ್ಟ. ಅಂತಿಮವಾಗಿ ಬ್ರಿಟೀಷರನ್ನು ದೇಶದಿಂದ ತೊಲಗಿಸಬೇಕು ಎಂಬ ಕರೆ ನೀಡಲು ಮಹಾತ್ಮಾ ಗಾಂಧಿ 1942 ಆಗಸ್ಟ್ 8ರಂದು ಅವರು ಬಾಂಬೆ ಕಾಂಗ್ರೆಸ್ ಅಧಿವೇಶನದಲ್ಲಿ ಕರೆ ಕೊಟ್ಟರು. ಈ ಸಂದರ್ಭದಲ್ಲಿ ಅಂದಿನ ಬ್ರಿಟೀಷ್ ಸರ್ಕಾರ ದಸ್ತಗಿರಿ ಮಾಡಿ ಜೈಲಿಗೆ ಹಾಕಿದ್ದರು. ಆಗ ಕಾಂಗ್ರೆಸ್ ನಾಯಕರುಗಳು ದೇಶದ ಜನರಿಗೆ ಕರೆಕೊಟ್ಟು, ನಾವು ಜೈಲು ಸೇರಿದಾಗ ಚಳುವಳಿ ನಿಲ್ಲಬಾರದು. ಈ ಚಳುವಳಿ ಉಗ್ರ ಸ್ವರೂಪ ತಾಳಿ ಬ್ರಿಟೀಷರು ದೇಶ ಬಿಟ್ಟು ತೊಲಗುವಂತೆ ಮಾಡಬೇಕು ಎಂದರು. ಅದಕ್ಕಾಗಿ ‘ಮಾಡು ಇಲ್ಲವೆ ಮಡಿ’ ಎಂಬ ಘೋಷವಾಕ್ಯ ನೀಡುತ್ತಾರೆ. ಸ್ವಾತಂತ್ರ್ಯ ಪಡೆಯಲು ನೀವೆಲ್ಲರೂ ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿ ಎಂದು ಕರೆ ಕೊಟ್ಟಿದ್ದರು’ ಎಂದರು.

- Advertisement -

‘ನಾವೆಲ್ಲರೂ ಸ್ವಾತಂತ್ರ್ಯದ ಫಲಾನುಭವಿಗಳು. 2014ರಲ್ಲಿ ಮೋದಿ ಅವರು ಕಾಂಗ್ರೆಸ್ ಗೆ 60 ವರ್ಷ ಅಧಿಕಾರ ನೀಡಿದ್ದೀರಿ. ನಮಗೆ 60 ತಿಂಗಳು ಅಧಿಕಾರ ಕೊಡಿ. ದೇಶದ ಸ್ವರೂಪವನ್ನೇ ಬದಲಿಸುತ್ತೇವೆ ಎಂದು ದೇಶದ ಜನರ ಮುಂದೆ ಮನವಿ ಮಾಡಿದ್ದರು. ಇಂದು ದೇಶದ ಆರ್ಥಿಕ ಹಾಗೂ ಸಾಮಾಜಿಕ ಚಿತ್ರಣ ಬದಲಾಗಿದೆ ಆದರೆ, ಅವರು ಹೇಳಿದ್ದಕ್ಕೆ ತದ್ವಿರುದ್ಧವಾಗಿ ಬದಲಾವಣೆಯಾಗಿದೆ. ಬಿಜೆಪಿಯ 7 ವರ್ಷಗಳ ಅವಧಿಯಲ್ಲಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆ ಎತ್ತುವ ಬದಲು, ಶೇ.23ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. 12 ಕೋಟಿ ಉದ್ಯೋಗ ನಷ್ಟ, ನಿರುದ್ಯೋಗ ಪ್ರಮಾಣ ಹೆಚ್ಚಳ. ದೇಶದ ಜಿಡಿಪಿ ಮೈನಸ್ 7.7%ಗೆ ಇಳಿದಿದೆ. ಇದು ದೇಶಕ್ಕೆ ಮೋದಿ ಅವರ ಕೊಡುಗೆ. ದೇಶದಲ್ಲಿ ಜನರ ಬದುಕಿನ ಪರಿಸ್ಥಿತಿ ಹೇಳಲಾರದಷ್ಟು ಹೀನಾಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದನಂತರ ಜನರ ಜೀವನ ವೆಚ್ಚ ಎರಡು ಪಟ್ಟು ಹೆಚ್ಚಾಗಿದೆ. ಸಾಮಾನ್ಯ ಜನ ಹೇಗೆ ಬದುಕುತ್ತಾರೆ. ಸುಳ್ಳು ಹೇಳಿರುವುದು ಬಿಟ್ಟರೆ ಇವರ ಸಾಧನೆ ಬೇರೆ ಇಲ್ಲ. ಸ್ವತಂತ್ರ್ಯ ಭಾರತದಲ್ಲಿ ಮೋದಿ ಅವರಷ್ಟು ಸುಳ್ಳು ಹೇಳಿದ ಪ್ರಧಾನಿ ಬೇರೊಬ್ಬರಿಲ್ಲ. ಸಾವರ್ಕರ್ ಹಾದಿಯಾಗಿ ಬಿಜೆಪಿಯ ಯಾವ ನಾಯಕರೂ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿಲ್ಲ. ತ್ಯಾಗ ಬಲಿದಾನಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್’ ಎಂದು ಟೀಕಿಸಿದರು.

‘ಬಿಜೆಪಿ ಸರ್ಕಾರ ಸಮಾಜ ಪರಿವರ್ತನೆ ಮಾಡುವ ಸರ್ಕಾರಗಳಲ್ಲ. ಸಮಾಜ ಬದಲಾವಣೆಯಾಗಿ, ಎಲ್ಲರಿಗೂ ನ್ಯಾಯ, ಅವಕಾಶ ಸಿಗಬೇಕು. ದೇಶದ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಿ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಕೊಟ್ಟರು. ಆದರೆ ಬಿಜೆಪಿಯವರಿಗೆ ಇದರ ಮೇಲೆ ನಂಬಿಕೆ ಇಲ್ಲ. ಅವರಿಗೆ ಈಗಲೂ ನಂಬಿಕೆ ಇರುವುದು ಮೇಲು, ಕೀಳು, ತಾರತಮ್ಯದ ವ್ಯವಸ್ಥೆ ಮೇಲೆ. ಅದಕ್ಕಾಗಿ ಸಮಾಜವನ್ನು ಒಡೆದು ಛಿದ್ರ ಮಾಡಿ ಸಮಾಜವನ್ನು ತಮ್ಮ ಕಪಿಮುಷ್ಛಿಯಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಟಿಪ್ಪು ಸುಲ್ತಾನ್ ಜಯಂತಿ ಮಾಡಿದಾಗ ನನ್ನನ್ನು ಹಿಂದು ವಿರೋಧಿ ಎಂದು ಬಿಂಬಿಸಿದರು. ಟಿಪ್ಪು ರಾಜ್ಯದಲ್ಲಿ ದಿವಾನರಾಗಿದ್ದವರು ಯಾರು? ಅವರು ಯಾವ ಜಾತಿಗೆ ಸೇರಿದವರು? ಟಿಪ್ಪು ಆಡಳಿತದಲ್ಲಿ ಹಣಕಾಸು ಜವಾಬ್ದಾರಿ ನಿಭಾಯಿಸಿದ್ದ ಕೃಷ್ಣಸ್ವಾಮಿ ಅವರು ಯಾವ ಜಾತಿಗೆ ಸೇರಿದವರು? ಮೊಘಲರ 600 ವರ್ಷಗಳ ಆಳ್ವಿಕೆ ಕಾಲದ ಅಷ್ಟೂ ಸಮಯದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದವರು ಬ್ರಾಹ್ಮಣರೇ. ಟಿಪ್ಪು ಆಡಳಿತ ಅವಧಿಯಲ್ಲಿ ನಾಲ್ಕು ಯುದ್ಧಗಳು ನಡೆದವು, ಅದು ಬ್ರಿಟೀಷರ ವಿರುದ್ಧವಾಗಿತ್ತು. ಟಿಪ್ಪು ಯಾವ ದೇಶ ದ್ರೋಹ ಮಾಡಿದ್ದ ಅಂತಾ ಯಾರಾದರೂ ಹೇಳುತ್ತಾರಾ? ಇಲ್ಲ. ಬ್ರಿಟೀಷರ ವಿರುದ್ಧ ಹೋರಾಡಿದ ವ್ಯಕ್ತಿ ಜಯಂತಿ ಮಾಡಿದರೆ ನಿಮಗ್ಯಾಕೆ ಕೋಪ? ಬಿಜೆಪಿಯವರಿಗೆ ಪೂರ್ಣಯ್ಯ ಅವರ ಮೇಲೆ ಕೋಪ ಇಲ್ಲ, ಹೇಗಿದೆ ನೋಡಿ ಬಿಜೆಪಿಯ ದ್ವಂಧ್ವ ನೀತಿ. ಬಿಜೆಪಿಗರು ಎಂತಹ ನೀಚರು ಎಂದು ಸಾಬೀತಾಗುತ್ತದೆ’ ಎಂದರು.



Join Whatsapp