ಉತ್ತರಾಖಂಡ್: ಕೋವಿಡ್ 19 ಮಧ್ಯೆಯೂ ಕುಂಭಮೇಳ ನಡೆದಿತ್ತು. ಅದಾದ ಬಳಿಕ ಕೋವಿಡ್ ಪ್ರಕರಣಗಳು ಹೆಚ್ಚಿದ್ದವು. ನಂತರ ಕುಂಭಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಕೋವಿಡ್ 19 ತಪಾಸಣೆ ಮಾಡಲು ಡಯಾಗ್ನೋಸ್ಟಿಕ್ ಸಂಸ್ಥೆಗಳಿಗೆ ಉತ್ತರಾಖಂಡ ಸರ್ಕಾರವೇ ಗುತ್ತಿಗೆ ನೀಡಿತ್ತು. ಅದರ ಅನ್ವಯ ಈ ಲ್ಯಾಬೋರೇಟರಿಗಳು ಜನರಿಗೆ ಕೊರೋನಾ ಆ್ಯಂಟಿಜೆನ್ ಟೆಸ್ಟ್ ಮತ್ತು ಆರ್ ಟಿ-ಪಿಸಿಆರ್ ಟೆಸ್ಟ್ ಗಳನ್ನು ಮಾಡಿ ರಿಪೋರ್ಟ್ ನೀಡಬೇಕಾಗಿತ್ತು. ಆದರೆ ಲ್ಯಾಬೋರೇಟರಿಗಳು ಅದೆಷ್ಟೋ ಜನರಿಗೆ ಕೋರೊನಾ ತಪಾಸಣೆಯನ್ನೇ ಮಾಡದೆ ವರದಿ ನೀಡಿದ್ದವು. ಅದಕ್ಕಾಗಿ ಹಣ ಪಡೆದಿದ್ದಲ್ಲದೆ, ಸರ್ಕಾರಕ್ಕೆ ತೋರಿಸಲು ನಕಲಿ ಬಿಲ್ ಗಳನ್ನೂ ಸೃಷ್ಟಿಸಿದ್ದವು. ಹಗರಣ ಬೆಳಕಿಗೆ ಬರುತ್ತಿದ್ದಂತೆ ಉತ್ತಾರಖಂಡ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು.
ಈ ಲ್ಯಾಬೋರೇಟರಿಗಳು ಹೇಗೆ ಜನರನ್ನು ವಂಚಿಸಿವೆ ಎಂಬುದನ್ನು ಇಡಿ ವಿವರಿಸಿದೆ. ಒಬ್ಬರ ಸ್ಯಾಂಪಲ್ ತಪಾಸಣೆಯ ವರದಿಯನ್ನೇ ಹಲವರಿಗೆ ನೀಡಿದ್ದಾಗಿ ತಿಳಿಸಿದೆ. ಅದೆಷ್ಟರ ಮಟ್ಟಿಗೆ ಎಡವಟ್ಟು ಮಾಡಿಕೊಂಡಿವೆ ಎಂದರೆ, ಕುಂಭಮೇಳದಲ್ಲಿ ಪಾಲ್ಗೊಳ್ಳದೆ, ಕೋವಿಡ್ ತಪಾಸಣೆಗೆ ಒಳಗಾಗದೆ ಇರುವವರ ಮೊಬೈಲ್ ಗೂ ನೆಗೆಟಿವ್ ರಿಪೋರ್ಟ್ ಹೋಗಿದೆ ಎಂದು ಇಡಿ ಮಾಹಿತಿ ನೀಡಿದೆ. ಸದ್ಯ ತನಿಖೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ ಐದು ಲ್ಯಾಬೋರೇಟರಿಗಳ ಉನ್ನತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೇರಿದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದೆ. ಸದ್ಯ ಈ ಲ್ಯಾಬೋರೇಟರಿಗಳ ಲೈಸೆನ್ಸ್ ರದ್ದುಗೊಳಿಸಲಾಗಿದ್ದು, ಯಾವುದೇ ರೋಗ ತಪಾಸಣೆ ಮಾಡುವಂತಿಲ್ಲ ಎಂದು ಆದೇಶ ನೀಡಲಾಗಿದೆ.