ಕಾನ್ಪುರ: ಯುಪಿಯಲ್ಲಿ ವ್ಯಾಪಕವಾಗಿ ತಾಂಡವವಾಡುತ್ತಿರುವ ನಿರುದ್ಯೋಗ, ಮಹಿಳಾ ಅಭದ್ರತೆ, ಭ್ರಷ್ಟಾಚಾರ, ರೈತರ ಸಮಸ್ಯೆ, ಬೆಲೆಯೇರಿಕೆ, ದುಬಾರಿ ವಿದ್ಯುಚ್ಛಕ್ತಿ, ಹಣದುಬ್ಬರ, ಕಬ್ಬುಬೆಳೆಗಾರರ ಸಮಸ್ಯೆ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಕಾಂಗ್ರೆಸ್ ‘ಗಡ್ಡಿ ಚೋಡೋ’ (ಅಧಿಕಾರ ತೊರೆಯಿರಿ) ಅಭಿಯಾನವನ್ನು ಹಮ್ಮಿಕೊಂಡಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿರ್ದೇಶನದ ಮೇರೆಗೆ ನಡೆಯುವ ಈ ಅಭಿಯಾನದ ಪ್ರಯುಕ್ತ ಆಗಸ್ಟ್ 9, 10 ರಂದು ಉತ್ತರ ಪ್ರದೇಶದ ಎಲ್ಲಾ ಅಸೆಂಬ್ಲಿ ಮಟ್ಟದಲ್ಲಿ ಯುಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಲಿದೆಯೆಂದು ಕಾಂಗ್ರೆಸ್ ಮುಖಂಡ ಅಜಯ್ ಕುಮಾರ್ ಲಲ್ಲು ಅವರು ಬುಧವಾರ ತಿಳಿಸಿದ್ದಾರೆ.
ಯುಪಿಯನ್ನು “ಜಂಗಲ್ ರಾಜ್” ಗೆ ಹೋಲಿಸಿದ ಅಜಯ್ ಕುಮಾರ್ ಅವರು ಬಿಜೆಪಿಯ ದುರಾಡಳಿತದಿಂದಾಗಿ ಸಮಾಜದ ಎಲ್ಲಾ ವರ್ಗದವರು ದುಃಖ, ಹತಾಶೆಯಿಂದಾಗಿ ನಿರಾಶೆಗೊಂಡಿದ್ದಾರೆ. ಸರ್ಕಾರದ ದಮನಕಾರಿ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ವತಿಯಿಂದ ಆಗಸ್ಟ್ 9-10 ರಂದು ಇಡೀ ಉತ್ತರಪ್ರದೇಶದಲ್ಲಿ ಪ್ರತಿಭಟನೆ ನಡೆಯಲಿದೆಯೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.