ಟೋಕಿಯೋ ಒಲಿಂಪಿಕ್ಸ್: ಫೈನಲ್ ಗೆ ಲಗ್ಗೆಯಿಟ್ಟು ಕುಸ್ತಿಯಲ್ಲಿ ಇತಿಹಾಸ ನಿರ್ಮಿಸಿದ ರವಿಕುಮಾರ್

Prasthutha|

ಟೋಕಿಯೋ, ಆ.4: ಟೋಕಿಯೋ ಒಲಿಂಪಿಕ್ಸ್ ನ ಪುರುಷರ ಕುಸ್ತಿ 57 ಕೆ.ಜಿ ವಿಭಾಗದಲ್ಲಿ ರವಿಕುಮಾರ್ ದಹಿಯಾ ಫೈನಲ್ ಪ್ರವೇಶಿಸಿ ಇತಿಹಾಸ ರಚಿಸಿದ್ದಾರೆ. ಇದರೊಂದಿಗೆ ರವಿಕುಮಾರ್, ಭಾರತಕ್ಕೆ ಚಿನ್ನ ಆಥವಾ ಬೆಳ್ಳಿಯ ಪದಕವನ್ನು ಖಾತ್ರಿಪಡಿಸಿದ್ದಾರೆ.

- Advertisement -

ಬುಧವಾರ ನಡೆದ ಪುರುಷರ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ರವಿಕುಮಾರ್, ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಅಭೂತಪೂರ್ವ ಗೆಲುವು ದಾಖಲಿಸಿದರು.

ಮೊದಲ ಸುತ್ತಿನಲ್ಲಿ 0-1 ಹಾಗೂ ದ್ವಿತೀಯ ಸುತ್ತಿನಲ್ಲಿ 2-9ರಲ್ಲಿ ಹಿನ್ನಡೆ ಅನುಭವಿಸಿದ್ದ ರವಿಕುಮಾರ್, ಕೊನೆಯ ಸುತ್ತಿನಲ್ಲಿ ನಂಬಲಾಗದ ರೀತಿಯಲ್ಲಿ ತಿರುಗೇಟು ನೀಡಿ ಎದುರಾಳಿಯನ್ನು ಕಟ್ಟಿ ಹಾಕಿದರು. ಕೆಚ್ಚೆದೆಯ ಹೋರಾಟ ಪ್ರದರ್ಶಿಸುವ ಮೂಲಕ ಕ್ರೀಡಾ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.

- Advertisement -

ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ಗೆಲ್ಲುತ್ತಿರುವ ಐದನೇ ಭಾರತೀಯ ಕುಸ್ತಿಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೂಲಕ ದಿಗ್ಗಜರಾದ ಕೆ.ಡಿ ಜಾಧವ್, ಸುಶೀಲ್ ಕುಮಾರ್, ಯೋಗೇಶ್ವರ್ ದತ್ ಮತ್ತು ಸಾಕ್ಷಿ ಮಲಿಕ್ ಸಾಲಿಗೆ ಸೇರಿದ್ದಾರೆ.

ಸುಶೀಲ್ ಕುಮಾರ್ ಬಳಿಕ ಒಲಿಂಪಿಕ್ ಫೈನಲ್ಗೆ ಪ್ರವೇಶಿಸಿದ ಭಾರತದ ಎರಡನೇ ಕುಸ್ತಿಪಟು ಎಂಬ ಹಿರಿಮೆಗೂ ಭಾಜನರಾಗಿದ್ದಾರೆ.

ಸೆಮಿಫೈನಲ್ ನಲ್ಲಿ ದೀಪಕ್ ಪೂನಿಯಾಗೆ ಸೋಲು
ಪುರುಷರ ಕುಸ್ತಿ 86 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ದೀಪಕ್ ಪೂನಿಯಾ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ.
ಅಮೆರಿಕದ ಮಾರಿಸ್ ಟೈಲರ್ ವಿರುದ್ಧ ಸೋಲು ಕಂಡ ದೀಪಕ್, ನಾಳೆ ಕಂಚಿನ ಪದಕಕ್ಕಾಗಿ ಅಖಾಡಕ್ಕಿಳಿಯಲಿದ್ದಾರೆ.



Join Whatsapp