ಲಕ್ನೋ, ಆ.3: ಲಕ್ನೋದಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕ್ಯಾಬ್ ಚಾಲಕನನ್ನು ಥಳಿಸಿ ಕ್ಯಾಮರಾದಲ್ಲಿ ಸೆರೆಯಾದ ಮಹಿಳೆಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕರು ಆಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಆಕೆಯನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಹ್ಯಾಶ್ಟ್ಯಾಗ್ ‘arrestlucknowgirl’ ಕೂಡ ಟ್ವಿಟರ್ ನಲ್ಲಿ ಟ್ರೆಂಡ್ ಆಗಿತ್ತು. ಕಪಾಳಮೋಕ್ಷ ಮಾಡಿಸಿಕೊಂಡ ವ್ಯಕ್ತಿ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಸೆಂಟ್ರಲ್ (ಲಕ್ನೋ) ಚಿರಂಜೀವ್ ನಾಥ್ ಸಿನ್ಹಾ ಹೇಳಿದ್ದಾರೆ.
ಯುವತಿ ಯುವಕನೋರ್ವನಿಗೆ ಕಪಾಳಮೋಕ್ಷ ಮಾಡಿದ ವೈರಲ್ ವೀಡಿಯೋ ಪ್ರಕರಣದಲ್ಲಿ, ನಾವು ಇಂದು ಸಂತ್ರಸ್ತ ವ್ಯಕ್ತಿಯಿಂದ ದೂರು ಸ್ವೀಕರಿಸಿದ್ದೇವೆ. ದೂರು ಆಧರಿಸಿ, ಕೃಷ್ಣ ನಗರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ ಎಂದು ಡಿಸಿಪಿ ಸಿನ್ಹಾ ತಿಳಿಸಿದ್ದಾರೆ.