ನವದೆಹಲಿ ಆಗಸ್ಟ್ 3: ಜಗೇಶ್ವರ ಧಾಮ ದೇವಸ್ಥಾನದಲ್ಲಿ ಗಲಭೆ ಸೃಷ್ಟಿಸಿ, ಅರ್ಚಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಉತ್ತರಪ್ರದೇಶದ ಆಯೋನ್ಲಾದ ಬಿಜೆಪಿ ಸಂಸದ ಧರ್ಮೇಂದ್ರ ಕಶ್ಯಪ್ ಅವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
ಕಶ್ಯಪ್ ಅವರು ಉತ್ತರಾಖಂಡದ ಅಲ್ಮೋರ ಜಗೇಶ್ವರ ದೇವಸ್ಥಾನದಲ್ಲಿ ಅರ್ಚಕರೊಂದಿಗೆ ಅವಾಚ್ಯ ಪದಬಳಕೆ ಮಾಡಿದ್ದರು. ಸಂಸದರು ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆಂದು ಅರ್ಚಕರು ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡ ಅರ್ಚಕರು ಸಂಸದರ ಈ ವರ್ತನೆಯನ್ನು ಖಂಡಿಸಿ ಕಶ್ಯಪ್ ವಿರುದ್ಧ ದೂರು ನೀಡಿದ್ದರು.
ಕಶ್ಯಪ್, ಆತನ ಸಹಚರರು ಶನಿವಾರ ಮಧ್ಯಾಹ್ನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಪ್ರತಿದಿನ ಸಂಜೆ 6 ಘಂಟೆಯ ನಂತರ ದೇವಸ್ಥಾನದಲ್ಲಿ ಸಂದರ್ಶಕರಿಗೆ ಅವಕಾಶವಿಲ್ಲ. ಆದರೆ ಸಂಸದ ಮತ್ತು ಸಹಚರರು ಸಂಜೆ 6.30 ನಂತರವು ದೇವಸ್ಥಾನ ಒಳಗೆ ಉಳಿದಿದ್ದರೆಂದು ಜಗೇಶ್ವರ ಧಾಮ ಮಂದಿರ ಸಮಿತಿ ವ್ಯವಸ್ಥಾಪಕ ಭಗವಾನ್ ಭಟ್ ತಿಳಿಸಿದ್ದಾರೆ.
ಸಂಸದರನ್ನು ದೇವಸ್ಥಾನದಿಂದ ನಿರ್ಗಮಿಸುವಂತೆ ವಿನಂತಿಸಿದಾಗ ಕೋಪಗೊಂಡ ಅವರು ಅರ್ಚಕರನ್ನು ನಿಂದಿಸಲು ಮತ್ತು ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಗೋಪಾಲ್ ಸಿಂಗ್ ಬಿಶ್ತ್ ಅವರು ಸಂಸದ ಕಶ್ಯಪ್ ಮತ್ತು ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ