ಬೆಳ್ತಂಗಡಿ, ಆ.1: ಅರ್ಹ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ನೀಡಲಾಗುತ್ತಿರುವ ಆಹಾರ ಹಾಗೂ ಆರೋಗ್ಯ ಕಿಟ್ ಗಳನ್ನು ನಕಲಿ ಕಟ್ಟಡ ಕಾರ್ಮಿಕರು ಪಡೆಯುತ್ತಿರುವ ಘಟನೆ ಬೆಳ್ತಂಗಡಿ ತಾಲೂಕಿನಾದ್ಯಂತ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ನಿಜವಾದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಬದಲಾಗಿ ಕೋಟ್ಯಾಧೀಶರು , ಭೂಮಾಲೀಕರು, ದೊಡ್ಡ ಕೃಷಿಕರು ಖಾಸಗಿ ಬಸ್ ಚಾಲಕರು, ಆಟೋ ಚಾಲಕರು, ಅಂಗಡಿ ಮಾಲೀಕರು ಸೇರಿದಂತೆ ಕೆಲವೊಂದು ರಾಜಕೀಯ ಪಕ್ಷಗಳ ಕಾರ್ಯಕರ್ತರು ಕಟ್ಟಡ ಕಾರ್ಮಿಕರೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕಾರ್ಮಿಕರ ದೃಢೀಕರಣ ಪತ್ರ ಪಡೆದು ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾರ್ಮಿಕ ಇಲಾಖೆ ಖಾಲಿ
ತಾಲೂಕಿನಲ್ಲಿ ಲಕ್ಷಾಂತರ ಜನರು ವಿವಿಧ ಸ್ತರದ ಕಾರ್ಮಿಕರಿದ್ದಾರೆ. ಆದರೆ ಬೆಳ್ತಂಗಡಿ ತಾಲೂಕಿನಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ ಅಧಿಕಾರಿ , ಸಿಬ್ಬಂದಿ ಇಲ್ಲದೆ ಖಾಲಿ ಖಾಲಿಯಾಗಿ ಉಳಿದಿದೆ. ಸದ್ಯ ಓರ್ವ ಕಾರ್ಮಿಕ ನಿರೀಕ್ಷಕರು ವಾರದಲ್ಲಿ ಒಂದೆರಡು ದಿನ ಬಂದು ಹೋಗುತ್ತಿದ್ದಾರೆ. ಅವರೊಬ್ಬರೆ ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಲಕ್ಷಾಂತರ ಕಾರ್ಮಿಕರ ಕೆಲಸ ಮಾಡಬೇಕಾಗಿದೆ. ಇದರಿಂದಾಗಿ ನಕಲಿ ಕಾರ್ಮಿಕರು ತಮ್ಮ ಬೇಲೆ ಬೇಯಿಸಿಕೊಳ್ಳುತ್ತಿದ್ದಾರೆ.
ಒಂದೇ ಸಂಘಟನೆಯ ನೇತೃತ್ವ
ಬೆಳ್ತಂಗಡಿ ತಾಲೂಕಿನಲ್ಲಿ ಐದಾರು ಸಂಘಟನೆಗಳು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಧ್ಯೆ ಕೆಲಸ ಮಾಡುತ್ತಿದ್ದರೂ ಕೂಡ ಆರೆಸ್ಸೆಸ್ಸ್ ಪ್ರೇರಿತ ಭಾರತೀಯ ಮಜ್ದೂರು ಸಂಘ (ಬಿಎಂಎಸ್) ನ ಪದಾಧಿಕಾರಿಗಳನ್ನು ಮಾತ್ರ ಕಾರ್ಮಿಕ ಇಲಾಖೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಕರೆಯುವ ಮೂಲಕ ಸರ್ಕಾರಿ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆರೋಪವೂ ಇದೆ.
ನಾಳೆ ಬಾರ್ಯದಲ್ಲಿ ಕಿಟ್ ವಿತರಣೆ
ಸೋಮವಾರ ಬಾರ್ಯ ಪಂಚಾಯತ್ ನಲ್ಲಿ ಸಂಜೆ ಶಾಸಕ ಹರೀಶ್ ಪೂಂಜಾರವರು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ವಿತರಣೆ ಮಾಡಲಿದ್ದಾರೆ. ಇಲ್ಲೂ ಕೂಡ ನಕಲಿ ಕಾರ್ಮಿಕರು ಆಹಾರ ಕಿಟ್ ಪಡೆಯಲಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.