ಪ್ರಧಾನಿಯನ್ನು ಟೀಕಿಸುವ ಪೋಸ್ಟರ್ ಅಂಟಿಸಿದ್ದಕ್ಕಾಗಿ ದಾಖಲಾದ ಎಫ್.ಐ.ಆರ್ ರದ್ದುಗೊಳಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Prasthutha|

ದೆಹಲಿ, ಅಗಸ್ಟ್ 1 : ಕೋವಿಡ್ -19 ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಪೋಸ್ಟರ್ ಗಳನ್ನು ಅಂಟಿಸಿದ ಆರೋಪದ ಮೇಲೆ ದಾಖಲಾದ ಎಫ್.ಐ.ಆರ್ ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲವೆಂದು ಸುಪ್ರೀಮ್ ಕೋರ್ಟ್ ಹೇಳಿದೆ.

- Advertisement -


ನ್ಯಾಯಾಧೀಶರಾದ ಡಿ.ವೈ ಚಂದ್ರಚೂಡ್ ಮತ್ತು ಎಂ.ಆರ್ ಶಾ ಅವರನ್ನೊಳಗೊಂಡ ಪೀಠವು ದಾಖಲಾಗಿರುವ ಎಫ್.ಐ.ಆರ್ ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಆದರೆ ಹಿಂಪಡೆಯಬಹುದೆಂದು ವಕೀಲ ಪ್ರದೀಪ್ ಕುಮಾರ್ ಯಾದವ್ ಅವರಿಗೆ ತಿಳಿಸಿದರು.

ಮೂರನೇ ವ್ಯಕ್ತಿಯ ಕೋರಿಕೆಯ ಮೇರೆಗೆ ಎಫ್ ಐ ಆರ್ ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಎಫ್.ಐ.ಆರ್ ರದ್ದುಗೊಳಿಸಬೇಕಾದರೆ ಅರ್ಜಿದಾರನು ಅಥವಾ ಘೋಷಕರು ನ್ಯಾಯಾಲಯವನ್ನು ಸಂಪರ್ಕಿಸಲು ಸಾಧ್ಯವಿಲ್ಲದಂತಹ ಅಸಾಧಾರಣ ಸಂದರ್ಭದಲ್ಲಿ ಮಾತ್ರ ಇದನ್ನು ಮಾಡಬಹುದು. ಇದರ ಹೊರತು ಎಫ್.ಐ.ಆರ್ ರದ್ದುಗೊಳಿಸುವುದು ತಪ್ಪು ನಿದರ್ಶನವನ್ನು ನೀಡಿದಂತಾಗುತ್ತದೆಯೆಂದು ಪೀಠ ಹೇಳಿದೆ.

- Advertisement -

ಈ ಕುರಿತು ಪೋಸ್ಟರ್ ಅಂಟಿಸಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣ ಮತ್ತು ಬಂಧಿಸಿರುವ ಜನರ ವಿವರಗಳನ್ನು ತನ್ನ ಗಮನಕ್ಕೆ ತರುವಂತೆ ಜುಲೈ 19 ರಂದು ಸರ್ವೋಚ್ಚ ನ್ಯಾಯಾಲಯ ಯಾದವ್ ಅವರಿಗೆ ಆದೇಶಿಸಿತ್ತು. ಕೇಂದ್ರದ ಲಸಿಕೆ ನೀತಿಯನ್ನು ಟೀಕಿಸುವ ಪೋಸ್ಟರ್ ಗಳನ್ನು ಅಂಟಿಸುವ ಕುರಿತು ಎಫ್.ಐ.ಆರ್ ದಾಖಲಿಸದಂತೆ ಪೊಲೀಸರಿಗೆ ಆದೇಶವನ್ನು ನೀಡಲು ಸಾಧ್ಯವಿಲ್ಲವೆಂದು ಅದು ಹೇಳಿದೆ.


ಕೋವಿಡ್ -19 ವಿರುದ್ಧದ ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಮೋದಿಯನ್ನು ಟೀಕಿಸುವ ಪೋಸ್ಟರ್‌ ಗಳನ್ನು ಅಂಟಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ ಐಆರ್‌ ಗಳನ್ನು ರದ್ದುಗೊಳಿಸುವಂತೆ ಕೋರಿ ಯಾದವ್ ಅರ್ಜಿ ಸಲ್ಲಿಸಿದರು. ಸಾರ್ವಜನಿಕ ಉದ್ದೇಶಕ್ಕೆ ಸಂಬಂಧಿಸಿ ಪ್ರತಿಯೊಬ್ಬ ನಾಗರಿಕನ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುವುದು ಸಂವಿಧಾನದ ಮೂಲಭೂತ ಹಕ್ಕು ಎಂದು ಯಾದವ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.



Join Whatsapp