ಪಾಪ್ಯುಲರ್ ಫ್ರಂಟ್ ಪ್ರಕರಣದಲ್ಲಿ “ದಕ್ಷಿಣ ಭಯೋತ್ಪಾದನೆ” ಪದ ಬಳಕೆ ಸಮಂಜಸವಲ್ಲ: ಎಟಿಎಸ್ ವಿರುದ್ಧ ಹೈಕೋರ್ಟ್ ಅಸಮಾಧಾನ

Prasthutha|

ಮೀರತ್ , ಆಗಸ್ಟ್ 1: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿರುದ್ಧ ಯುಪಿ ಭಯೋತ್ಪಾದನಾ ನಿಗ್ರಹ ದಳವು “ ದಕ್ಷಿಣದ ಭಯೋತ್ಪಾದನೆ” (ಸೌತ್ ಟೆರರ್) ಎಂಬ ಪದ ಬಳಕೆ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್, ಪಿಎಫ್ ಐ ಬಗ್ಗೆ ಈ ಪದ ಬಳಕೆ ಸಮಂಜಸವಲ್ಲ ಎಂದು ಹೇಳಿದೆ.

- Advertisement -


ಹಿಂದು ಸಂಘಟನೆಗಳ ನಾಯಕರ ಹತ್ಯೆಗೆ ಸಂಚು ಮತ್ತು ರಾಜ್ಯದ ಸೂಕ್ಷ್ಮ ಸ್ಥಳಗಳಲ್ಲಿ ಭಯೋತ್ಪಾದನಾ ದಾಳಿ ಆರೋಪ ಹೊರಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದ ಇಬ್ಬರು ಸದಸ್ಯರನ್ನು ಫೆಬ್ರವರಿಯಲ್ಲಿ ಯುಪಿಯ ಎಟಿಎಸ್ ಬಂಧಿಸಿತ್ತು.
ಎಟಿಎಸ್ ನಡೆಸುತ್ತಿರುವ ಈ ಪ್ರಕರಣದ ತನಿಖೆಯನ್ನು ಎಟಿಎಸ್ ನಿಂದ ಸಿಬಿಐಗೆ ವರ್ಗಾಯಿಸುವಂತೆ ಕೋರಿ ಆರೋಪಿಗಳಲ್ಲಿ ಒಬ್ಬನಾದ ಅನ್ಶಾದ್ ಬದ್ರುದ್ದೀನ್ ತನ್ನ ಸಹೋದರನ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ಕೋರ್ಟ್ ಈ ಪ್ರತಿಕ್ರಿಯೆ ನೀಡಿದೆ.
ಈ ತನಿಖೆಯು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತಿಲ್ಲವೆಂದು ಅರೋಪಿ ಬದ್ರುದ್ದೀನ್ ಪರ ವಕೀಲರು ವಾದಿಸಿದ್ದರು. ಮಾತ್ರವಲ್ಲ ಪಿ.ಎಫ್.ಐ ಸಂಘಟನೆಯ ಸದಸ್ಯರಾಗಿರುವುದರಿಂದ ಅರ್ಜಿದಾರರ ವಿರುದ್ಧ ರಾಜ್ಯ ಪ್ರಾಧಿಕಾರ ಮತ್ತು ತನಿಖಾ ಸಂಸ್ಥೆಗಳು ಪೂರ್ವಗ್ರಹ ಪೀಡಿತವಾಗಿವೆಯೆಂದು ಆರೋಪಿಸಿದ್ದಾರೆ.

ಯುಪಿ ಎಟಿಎಸ್ ನ ಅಧಿಕೃತ ವೆಬ್ ಪೋರ್ಟಲ್ ನಲ್ಲಿ ನಮ್ಮ ಸಂಘಟನೆಯನ್ನು “ದಕ್ಷಿಣದ ಭಯೋತ್ಪಾದನೆ” ಎಂಬ ಲೇಬಲ್ ನಲ್ಲಿ ಬರೆಯಲಾಗಿದೆ ಎಂದು ಪಿ.ಎಫ್.ಐ ಪರ ವಕೀಲರು ವಾದಿಸಿದ್ದರು. ದಕ್ಷಿಣದ ಭಯೋತ್ಪಾದನೆ ಎಂಬ ಪದ ಬಳಕೆಯು ಪಕ್ಷಪಾತ ಅಥವಾ ದುರುದ್ದೇಶವನ್ನು ಬಿಂಬಿಸುತ್ತಿದೆಯೆಂದು ನ್ಯಾಯಮೂರ್ತಿಗಳಾದ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ಅಜಯ್ ಕುಮಾರ್ ಶ್ರೀವಾಸ್ತವ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಹೇಳಿದ್ದು, ಎಟಿಎಸ್ ನಡೆಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.

- Advertisement -

ಮಾತ್ರವಲ್ಲ ಈ ಪ್ರಕರಣವು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವುದರಿಂದ ಸಿಬಿಐಗೆ ವಹಿಸಬೇಕಾಗಿಲ್ಲ ಎಂದು ವಿಶ್ಲೇಷಿಸಿ ನ್ಯಾಯಾಲಯವು ಅನ್ಶಾದ್ ಬದ್ರುದ್ದೀನ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.


ಬದ್ರುದ್ದೀನ್ ಮತ್ತು ಫಿರೋಝ್ ಕೆ.ಸಿ ಎಂಬವರನ್ನು ಲಕ್ನೋದ ಗುಡಂಬದ ಕುಕ್ರೈಲ್ ಟ್ರೈ-ಜಂಕ್ಷನ್ ಬಳಿಯಿಂದ ಬಂಧಿಸಲಾಗಿದೆ ಎಂದು ಎಸ್‌ ಟಿಎಫ್ ಫೆಬ್ರವರಿಯಲ್ಲಿ ಹೇಳಿದೆ. ಯುಪಿ ಎಸ್.ಟಿ.ಎಫ್ ವಾದವನ್ನು ನಿರಾಕರಿಸಿರುವ ಪಿ.ಎಫ್.ಐ, ಕೇರಳದ ಈ ಇಬ್ಬರನ್ನು ಬಿಹಾರದಿಂದ ಮುಂಬೈ ಯಾತ್ರೆಯ ನಡುವೆ ಯುಪಿ ರೈಲ್ವೆ ನಿಲ್ದಾಣದಿಂದ ಅಕ್ರಮವಾಗಿ ಬಂಧಿಸಿಲಾಗಿದೆಯೆಂದು ಆರೋಪಿಸಿದೆ. ಪೊಲೀಸರ ಆರೋಪವನ್ನು ತಳ್ಳಿಹಾಕಿರುವ ಪಿ.ಎಫ್.ಐ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಸಂಘಟನೆಯ ವಿಸ್ತರಣೆಗಾಗಿ ತೆರಳಿದ್ದರೆಂದು ಸ್ಪಷ್ಟಪಡಿಸಿದೆ.



Join Whatsapp