ನಮ್ಮ ಬೇಡಿಕೆಗಳು ಈಡೇರುವವರೆಗೂ ಜಿಎಸ್‌ಟಿ ಪಾವತಿಸಬೇಡಿ ಎಂದು ಅಖಿಲ ಭಾರತ ನ್ಯಾಯಯುತ ಬೆಲೆ ಅಂಗಡಿಗಳ ಅಸೋಷಿಯೇಷನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರು ವರ್ತಕರಿಗೆ ಸಲಹೆ ನೀಡಿದ್ದಾರೆ.
ಹಲವು ಹಕ್ಕೊತ್ತಾಯಗಳನ್ನಿಟ್ಟುಕೊಂಡು ಹೋರಾಡುತ್ತಿರುವ ವರ್ತಕರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಕೂಗು ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ತಲುಪಬೇಕು. ಉದ್ಧವ್ ಠಾಕ್ರೆ ಮತ್ತು ನರೇಂದ್ರ ಮೋದಿ ಬರುವವರೆಗೂ ಹೋರಾಟ ನಿಲ್ಲಿಸಬೇಡಿ ಎಂದು ಕರೆ ನೀಡಿದ್ದಾರೆ.
ನರೇಂದ್ರ ಮೋದಿ ಇರಲಿ ಅಥವಾ ಮತ್ಯಾರೇ ಇರಲಿ, ನಿಮ್ಮ ಮಾತನ್ನು ಅವರು ಕೇಳಲೇಬೇಕು. ನೀವು ಇಂದಿನಿಂದ ಜಿಎಸ್‌ಟಿ ಪಾವತಿಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಯವರಿಗೆ ಬರೆಯಿರಿ. ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿದ್ದೇವೆಯೇ ಹೊರತು ಗುಲಾಮಿ ವ್ಯವಸ್ಥೆಯಲ್ಲಿ ಅಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ಮಹಾರಾಷ್ಟ್ರದ ಠಾಣೆ ಜಿಲ್ಲೆಯ ವರ್ತಕರು ಕೋವಿಡ್ ಮತ್ತು ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸಿದ್ದು ಸೂಕ್ತ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಇ-ಕಾಮರ್ಸ್ ಮಳಿಗೆಗಳು ಮಾತ್ರ ಕೆಲಸ ನಿರ್ವಹಿಸಿ ಲಾಭ ಮಾಡಿಕೊಂಡಿವೆ. ಆದರೆ ಉಳಿದ ವರ್ತಕರು ನಷ್ಟದಲ್ಲಿದ್ದಾರೆ ಎಂದು ಅವರು ದೂರಿದ್ದಾರೆ.