ಅಲ್ ಖೋಬಾರ್ , ಆ.31: ಸೌದಿ ಅರೇಬಿಯಾದ ಅಲ್ ಖೋಬಾರ್ ಎಂಬಲ್ಲಿ ಕಳೆದ ಐದೂವರೆ ವರ್ಷಗಳಿಂದ ಊರಿಗೆ ಹೋಗಲಾರದೆ ಮೂರುವರೆ ವರ್ಷಗಳಿಂದ ಇಕಾಮ ನವೀಕರಿಸದೆ ಕಂಪನಿಯಿಂದ ಕಿರುಕುಳ ಅನುಭವಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮೂಲದ ಅಬ್ದುಲ್ ರಹಮಾನ್ ಎಂಬುವರನ್ನು ಕಾನೂನು ಹೋರಾಟದ ಮೂಲಕ ಊರಿಗೆ ಕಲಿಸಲು ಇಂಡಿಯನ್ ಸೋಶಿಯಲ್ ಫಾರಂ ಯಶಸ್ವಿಯಾಗಿದೆ.
ಅಬ್ದುಲ್ ರಹಮಾನ್ ಎಂಬವರು ಅಲ್ ಖೋಬಾರ್ ನ ಸೀಪ್ ಎಕ್ಸಿಬಿಷನ್ ಸೆಂಟರ್ ಎಂಬ ಸಂಸ್ಥೆಯಲ್ಲಿ ಕಳೆದ 26 ವರ್ಷಗಳಿಂದ ದುಡಿಯುತ್ತಿದ್ದು, ಐದೂವರೆ ವರ್ಷ ಕಂಪನಿಯು ಊರಿಗೆ ಹೋಗಲು ಬಿಡದೆ ಮತ್ತು ಇಕಾಮವನ್ನು ನವೀಕರಿಸದೆ ಸತಾಯಿಸುತ್ತಿತ್ತು. ತನ್ನ ಈ ಕಷ್ಟವನ್ನು ಮನೆಯವರು ಊರಿನ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಗೆ ತಿಳಿಸಿದ್ದರು. ಪಕ್ಷದ ಮುಖಂಡರು ಇಂಡಿಯನ್ ಸೋಶಿಯಲ್ ಫಾರಂ (ISF) ಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದರು. ವಿಷಯ ಅರಿತ ಬಳಿಕ ಕಾರ್ಯಪ್ರವೃತ್ತರಾದ ಸಜೀದ್ ವೊಳವೂರು, ಇಬ್ರಾಹಿಂ ಕೃಷ್ಣಾಪುರ ಮತ್ತು ಹನೀಫ್ ದೇರಳಕಟ್ಟೆ ಇವರು ಭಾರತೀಯ ರಾಯಭಾರಿ ಕಚೇರಿಯ ಮೂಲಕ ಕಂಪನಿಯನ್ನು ಸಂಪರ್ಕಿಸಿ ಸಮಸ್ಯೆ ಇತ್ಯರ್ಥಕ್ಕೆ ಮನವಿ ಮಾಡಿದ್ದರು.
ಆದರೆ ಕಂಪನಿಯಿಂದ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಅಬ್ದುಲ್ ರಹ್ಮಾನ್ ಅವರ ಪತ್ನಿ ಗಂಭೀರ ಕಾಯಿಲೆಗೂ ತುತ್ತಾಗಿದ್ದರು. ಈ ಎಲ್ಲಾ ವಿಷಯಗಳನ್ನು ಕಾರ್ಮಿಕ ನ್ಯಾಯಾಲಯಕ್ಕೆ ತಿಳಿಸಿ ದೂರು ಸಲ್ಲಿಸಲಾಯಿತು.
ನ್ಯಾಯಾಲಯದಿಂದ ಅನುಮೋದನೆ ಪಡೆದುಕೊಂಡು ನಂತರ ತರ್ಹೀಲ್ ಮೂಲಕ ಎಕ್ಸಿಟ್ ಪೇಪರ್ ಅನ್ನು ಪಡೆದು ಅಬ್ದುಲ್ ರಹಮಾನ್ ಅವರನ್ನು ಊರಿಗೆ ಕಳುಹಿಸಿಕೊಡಲು ಇಂಡಿಯನ್ ಸೋಶಿಯಲ್ ಫಾರಂ ಯಶಸ್ವಿಯಾಗಿದೆ.