ಗಾಝಾ ಜುಲೈ27 : ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ತನ್ನ ದಿಗ್ಬಂಧನವನ್ನು ಬಿಗಿಗೊಳಿಸುವುದರಿಂದ ಉದ್ವಿಗ್ನತೆ ಉಲ್ಬಣಗೊಂಡು ಸಮಸ್ಯೆ ಉಂಟಾಗಲಿದೆಯೆಂದು ಇಸ್ಲಾಮಿಕ್ ಹಮಾಸ್ ಚಳವಳಿ ಇಸ್ರೇಲ್ ಅನ್ನು ಎಚ್ಚರಿಸಿದೆ. ಇಸ್ರೇಲ್ ನಿಂದ ಹೆಚ್ಚುತ್ತಿರುವ ದಿಗ್ಬಂಧನ ಮತ್ತು ಗಾಝಾದ ಮೇಲಿನ ಅತಿಕ್ರಮಣ ಇಸ್ರೇಲ್ ಗೆ ಮಾರಕವಾಗಲಿದೆಯೆಂದು ಗಾಝಾದ ಹಮಾಸ್ ವಕ್ತಾರ ಅಬ್ದುಲ್ ಲತೀಫ್ ಅಲ್- ಖಾನೌ ಹೇಳಿದ್ದಾರೆ. ಸುಮಾರು 15 ವರ್ಷಗಳಿಂದ ಗಾಝಾ ಪ್ರದೇಶದ ಮೇಲೆ ಹೇರಲಾಗಿರುವ ದಿಗ್ಬಂಧನ ಮತ್ತು ಆಕ್ರಮಣವನ್ನು ಕೊನೆಗೊಳಿಸುವುದು ಪ್ಯಾಲೇಸ್ತೀನ್ ಜನತೆಯ ಸ್ವಾಭಾವಿಕವಾದ ಹಕ್ಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಮೇ 10 ರಿಂದ 21 ರ ವರೆಗೆ 11 ದಿನಗಳ ಕಾಲ ಇಸ್ರೇಲ್- ಪ್ಯಾಲೇಸ್ತೀನ್ ಶಸ್ತ್ರಾಸ್ತ್ರ ಸಂಘರ್ಷದ ನಂತರ ಇಸ್ರೇಲ್ ಗಾಝಾದ ಮೇಲೆ ತನ್ನ ದಿಗ್ಬಂಧನವನ್ನು ಬಿಗಿಗೊಳಿಸಿದೆಯೆಂದು ಹಮಾಸ್ ಮತ್ತು ಪ್ಯಾಲೇಸ್ತೀನ್ ಬಣಗಳು ದೂರಿದ್ದವು. ಈ ಸಂಘರ್ಷದಲ್ಲಿ 250 ಕ್ಕೂ ಹೆಚ್ಚು ಫೆಲೆಸ್ತೀನಿಯರು ಮತ್ತು 13 ಇಸ್ರೇಲಿಗಳು ಸಾವನ್ನಪ್ಪಿದರು. ಫೆಲೆಸ್ತೀನ್ ಪುನರ್ನಿರ್ಮಾಣದ ಪ್ರಮುಖ ಸಮಸ್ಯೆಯನ್ನು ಪರಿಹರಿಸಲು ಇಸ್ರೇಲಿಗರು ಹಿಂಜರಿಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಅಲ್-ಖಾನೌ ಹೇಳಿದರು.
ಈ ಮಧ್ಯೆ ಕರಾವಳಿ ಪ್ರದೇಶದಲ್ಲಿ ಇಸ್ರೇಲ್ ದಿಗ್ಬಂಧನವನ್ನು ಬಿಗಿಗೊಳಿಸುವುದರಿಂದ ಇಸ್ರೇಲ್ ನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆಯೆಂದು ಫೆಲೇಸ್ತೀನಿಯನ್ ಇಸ್ಲಾಮಿಕ್ ಜಿಹಾದ್ ಚಳುವಳಿಯ ಹಿರಿಯ ನಾಯಕ ಖಾದರ್ ಹಬೀಬ್ ಎಚ್ಚರಿಸಿದ್ದಾರೆ. ಅದೇ ರೀತಿ ಗಾಝಾ ಪಟ್ಟಿಗೆ ಅಗತ್ಯ ಸಾಮಾಗ್ರಿಗಳನ್ನು ತಡೆಗಟ್ಟುವಲ್ಲಿ ಇಸ್ರೇಲ್ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ಅವರು ಹೇಳಿದರು.