ಪತ್ರಕರ್ತರು ಜನರ ಧ್ವನಿಯಾಗಬೇಕು: ಎಸ್.ಪಿ. ಋಷಿಕೇಶ್ ಸೋನಾವಣೆ

Prasthutha|

ಮಂಗಳೂರು, ಜುಲೈ 22: “ಪತ್ರಿಕಾರಂಗವು ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿದ್ದು, ಪತ್ರಕರ್ತರು ಸಮಾಜದಲ್ಲಿರುವ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಬೇಕು. ಆಗ ಪೊಲೀಸ್ ಇಲಾಖೆಯಿಂದಲೂ ಅದಕ್ಕೆ ಪೂರಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ” ಎಂದು ದ.ಕ. ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅಭಿಪ್ರಾಯಪಟ್ಟಿದ್ದಾರೆ.

- Advertisement -

ಅವರು ಇಂದು ಪ್ರೆಸ್ ಕ್ಲಬ್ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮಂಗಳೂರು ಪ್ರೆಸ್ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ನ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಪ್ರಭ ಪತ್ರಿಕೆಯ ಹಿರಿಯ ವರದಿಗಾರರಾದ ಡಾ. ಸಂದೀಪ್ ವಾಗ್ಲೆ ಅವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಾಳೆಯ ಪತ್ರಕರ್ತರು ಎಂಬ ಉಪನ್ಯಾಸ ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದು, ಹಿರಿಯ ಪತ್ರಕರ್ತ ಜೋಗಿ ಅವರು ಮಾತನಾಡಿ, ಮುಂದಿನ 10 ವರ್ಷಗಳಲ್ಲಿ ಪತ್ರಿಕೋದ್ಯಮದಲ್ಲಿ ನಾವು ನಿರೀಕ್ಷಿಸಲಾಗಿದ್ದ ಸ್ಥಿತ್ಯಂತರವನ್ನು ಕೊರೋನದಿಂದಾಗಿ ಈಗಾಗಲೇ ಅನುಭವಿಸುವಂತಾಗಿದೆ. ಕೊರೋನ ಸಾಂಕ್ರಾಮಿಕದಿಂದಾಗಿ ಬಹಳಷ್ಟು ಪತ್ರಿಕೆಗಳ ಮುದ್ರಣ ನಿಂತು ಹೋಗಿ ಆನ್ಲೈನ್ ಪತ್ರಿಕೆಯಾಗಿ ಹೊಸ ಸ್ವರೂಪವನ್ನು ಪಡೆಯುತ್ತಿದೆ ಎಂದು ಹೇಳಿದರು.

- Advertisement -

ಪತ್ರಕರ್ತರೊಬ್ಬರ ಪ್ರಶ್ನೆಗೆ ಜೋಗಿಯವರು ಪ್ರತಿಕ್ರಿಯಿಸುತ್ತಾ, ಮುದ್ರಣ ಮಾಧ್ಯಮವು ಕೊನೆಯಾಗುವ ಭೀತಿಯನ್ನು ಹಲವು ವರ್ಷಗಳಿಂದಲೂ ಎದುರಿಸುತ್ತಿದೆ. ಆದರೆ ಹಾಗಾಗುವುದಿಲ್ಲ. ಮುದ್ರಣ ಮಾಧ್ಯಮವು ಕಾಲಕ್ಕನುಗುಣವಾಗಿ ಬದಲಾಗುತ್ತಿದೆ. ಹೊಸ ಸ್ವರೂಪ, ವಿನ್ಯಾಸ ಪಡೆಯುತ್ತಿದೆ. ಮುದ್ರಣ ಮಾಧ್ಯಮದಲ್ಲಿರುವ ಜನರ ವಿಶ್ವಾಸವು ಇದಕ್ಕೆ ಕಾರಣ ಎಂದು ಹೇಳಿದರು.
ವೇದಿಕೆಯಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿರಾಜ್ ಎಚ್.ಜಿ., ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ ಪ್ರಾಸ್ತಾವಿಕ ಮಾತು ಆಡಿದರು. ಪಿ.ಬಿ. ಹರೀಶ್ ರೈ ನಿರೂಪಿಸಿದ ಕಾರ್ಯಕ್ರಮದ ಕೊನೆಗೆ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.



Join Whatsapp