ಮಂಗಳೂರು, ಜುಲೈ 22: ಬಸ್ ಚಲಾಯಿಸುತ್ತಿದ್ದ ವೇಳೆ ಕಡಿಮೆ ರಕ್ತದೊತ್ತಡದಿಂದಾಗಿ ಚಾಲಕ ಅಸ್ವಸ್ಥರಾಗಿ ಕುಸಿದು ಬಿದ್ದರೂ ಬಸ್ಸನ್ನು ಬದಿಗೆ ತಂದು ನಿಲ್ಲಿಸಿದ ಘಟನೆ ನಗರದ ಹೊರವಲಯದ ಅಡ್ಯಾರ್ ಬಳಿ ನಡೆದಿದೆ.
ಚಾಲಕ ಅಸ್ವಸ್ಥರಾಗಿ ಕುಸಿದು ಬೀಳುವಾಗ ಮುಂದಾಲೋಚನೆ ವಹಿಸಿ ಬಸ್ಸನ್ನು ಬದಿಗೆ ತಂದು ನಿಲ್ಲಿಸಿದ್ದರಿಂದ ದೊಡ್ಡ ದುರಂತವನ್ನು ತಪ್ಪಿಸಿದ್ದು ಪ್ರಯಾಣಿಕರ ಮೆಚ್ಚುಗೆಗೆ ಕಾರಣವಾಗಿದೆ.
ಪುತ್ತೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸಿನ ಚಾಲಕ ಪುತ್ತೂರು ನಿವಾಸಿ ಸಂತೋಷ್ ಎಂಬವರಿಗೆ ಬಸ್ ಅಡ್ಯಾರ್ ಬಳಿ ತಲುಪಿದಾಗ ಲೋ ಬಿಪಿ ಕಾರಣದಿಂದ ಕಣ್ಣು ಮಂಜಾಗುತ್ತಾ ಬರಲಾರಂಭಿಸಿದೆ. ಇನ್ನೇನು ಕುಸಿದು ಬೀಳಲಿದ್ದೇನೆ ಎಂಬಂತಾದಾಗ ಅವರಿಗೆ ಸಂಭವಿಸಬಹುದಾದ ಅನಾಹತದ ಪ್ರಜ್ಞೆ ಜಾಗೃತಗೊಂಡಿದ್ದು, ಕೂಡಲೇ ಕಷ್ಟಪಟ್ಟು ಬಸ್ಸನ್ನು ರಸ್ತೆಬದಿಗೆ ತಂದು ನಿಲ್ಲಿಸಿದ್ದಾರೆ, ಅಷ್ಟರಲ್ಲೇ ಅವರು ಸ್ಟೇರಿಂಗ್ ಮೇಲೆ ವಾಲಿದ್ದಾರೆ. ಈ ಮೂಲಕ ತಾನು ಅಸ್ವಸ್ಥನಾದರೂ ಸಂಭಾವ್ಯ ಭಾರಿ ದುರಂತವನ್ನು ತಪ್ಪಿಸಿದ್ದಾರೆ. ಹೋದ ಪ್ರಾಣ ಮರಳಿ ಪಡೆದಂತಾದ ಪ್ರಯಾಣಿಕರು ಚಾಲಕ ಸಂತೋಷ್ ರವರ ಕೆಲಸವನ್ನು ಕೊಂಡಾಡಿದ್ದಾರೆ.