ನವದೆಹಲಿ: ಯುಎಪಿಎ ಕಾಯ್ದೆಯಡಿಯಲ್ಲಿ ಬಂಧನದಲ್ಲಿದ್ದ ಪಾದ್ರಿ ಸ್ಟ್ಯಾನ್ ಸ್ವಾಮಿಯವರ ನಿಧನದ ಸುದ್ದಿ ಕೇಳಿದ ತಕ್ಷಣ ತೀವ್ರ ಅಘಾತಗೊಂಡಿರುವುದಾಗಿ ಎಂದು ವಿಶ್ವಸಂಸ್ಥೆ ಯ ಮಾನವ ಹಕ್ಕುಗಳ ತಜ್ಞರು ಹೇಳಿದ್ದಾರೆ.
ಮಾನವ ಹಕ್ಕುಗಳಿಗೆ ಧ್ವನಿಯಾಗುತ್ತಿದ್ದ ಸ್ವಾಮಿಯವರ ಸಾವು ಮತ್ತು ಹಕ್ಕು ನಿರಾಕರಣೆಯು ಭಾರತದ ಮಾನವ ಹಕ್ಕುಗಳ ದಾಖಲೆಯಲ್ಲಿ ಶಾಶ್ವತವಾದ ಕಪ್ಪುಚುಕ್ಕೆಯಾಗಿ ದಾಖಲಾಗಲಿದೆ ಎಂದು ವಿಶ್ವ ಸಂಸ್ಥೆಯು ತೀವ್ರ ಕಳವಳ ವ್ಯಕ್ತಪಡಿಸಿದೆ.
ಬುಡಕಟ್ಟು ಜನಾಂಗದ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುತ್ತಿದ್ದ ಸ್ಟ್ಯಾನ್ ಸ್ವಾಮಿಯವರನ್ನು ಎಲ್ಗಾರ್ ಪರಿಷತ್ – ಮಾವೋವಾದಿ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಎಪಿಎ) ಯಡಿಯಲ್ಲಿ ಬಂಧಿಸಲಾಗಿತ್ತು. 84 ವರ್ಷ ಪ್ರಾಯದ ಸ್ವಾಮಿ ಜುಲೈ 5, 2021 ರಂದು ಮುಂಬೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಗುರುವಾರ ಬಿಡುಗಡೆಗೊಳಿಸಿದ ತನ್ನ ಮಾಧ್ಯಮ ಹೇಳಿಕೆಯಲ್ಲಿ ವಿಶ್ವಸಂಸ್ಥೆಯ ವಿಶೇಷ ವರದಿಗಾರರಾದ ಮೇರಿ ಲಾಲರ್, ಫಾದರ್ ಸ್ಟ್ಯಾನ್ ಸ್ವಾಮಿಯವರ ಪ್ರಕರಣ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲಿ ನಿರಾಧಾರವಾಗಿ ಬಂಧನದಲ್ಲಿರುವ ಇನ್ನಿತರ ಮಾನವ ಹಕ್ಕುಗಳ ಹೋರಾಟಗಾರರ ಮೇಲಿನ ಪ್ರಕರಣವನ್ನು ಕೈಬಿಡುವಂತೆ ಆಗ್ರಹಿಸಿದರು.
ನಾಲ್ಕು ದಶಕಗಳಿಂದ ಮಾನವ ಹಕ್ಕುಗಳು ಮತ್ತು ಸಾಮಾಜಿಕ ಹೋರಾಟಗಾರರಾಗಿದ್ದ ಕ್ಯಾಥೊಲಿಕ್ ಪಾದ್ರಿ ಸ್ವಾಮಿ ಯವರ ಸಾವು ಭಾರತೀಯ ಮಾನವ ಹಕ್ಕುಗಳ ದಾಖಲೆಯಲ್ಲಿ ಶಾಶ್ವತವಾದ ಕಪ್ಪುಚುಕ್ಕೆಯಾಗಿ ಉಳಿಯಲಿದೆಯೆಂದು ಲಾಲರ್ ತಿಳಿಸಿದ್ದಾರೆ.
ಮಾನವ ಹಕ್ಕುಗಳ ಪ್ರತಿಪಾದಕರಾಗಿದ್ದ ಸ್ಟ್ಯಾನಿ ಯವರನ್ನು ಭಯೋತ್ಪಾದಕರೆಂದು ಬಿಂಬಿಸಿದ ಪ್ರಕರಣವನ್ನು ಕ್ಷಮಿಸಲು ಸಾಧ್ಯವಿಲ್ಲ. ಹಕ್ಕು ನಿರಾಕರಣೆಯ ಮೂಲಕ ಅವರ ಸಾವಿಗೆ ಕಾರಣವಾದ ಅಂಶಗಳನ್ನು ಮರೆಯಲು ಸಾಧ್ಯವಿಲ್ಲವೆಂದು ಲಾಲರ್ ಹೇಳಿದ್ದಾರೆ.
ಸ್ವಾಮಿ ಪ್ರಕರಣವನ್ನು ನಿರ್ವಹಿಸಿದ ಬಗ್ಗೆ ಅಂತಾರಾಷ್ಟ್ರೀಯ ಟೀಕೆಗಳನ್ನು ಭಾರತ ನಿರಾಕರಿಸಿದೆ. ಮಾತ್ರವಲ್ಲ ಭಾರತವು ತನ್ನ ಎಲ್ಲ ನಾಗರಿಕರ ಮಾನವ ಹಕ್ಕುಗಳ ಉತ್ತೇಜನ, ರಕ್ಷಣೆಗೆ ಬದ್ಧವಾಗಿದೆ. ದೇಶದ ಪ್ರಜಾಪ್ರಭುತ್ವ ರಾಜಕೀಯವು ಸ್ವತಂತ್ರ ನ್ಯಾಯಾಂಗ ಮತ್ತು ರಾಷ್ಟ್ರೀಯ ಮತ್ತು ಮಾನವ ಹಕ್ಕುಗಳ ಆಯೋಗಗಳಿಂದ ಪೂರಕವಾಗಿದೆ ಎಂದು ಭಾರತ ಹೇಳಿದೆ.
ಸ್ವಾಮಿ ಯವರನ್ನು ಯುಎಪಿಎ ಕಾಯ್ದೆಯಡಿಯಲ್ಲಿ ಎನ್.ಐ.ಎ ಬಂಧಿಸಿದ ನಂತರ ಹಲವಾರು ಬಾರಿ ಜಾಮೀನು ನಿರಾಕರಿಸಲಾಗಿತ್ತು.