ಮಾಧ್ಯಮ ಸ್ವಾತಂತ್ರ್ಯ ಮತ್ತು ಸ್ವತಂತ್ರ ಮಾಧ್ಯಮ

Prasthutha|

ಆತ್ಮನಿರ್ಭರ ಭಾರತ ತನ್ನ ಅಂತರಾತ್ಮದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ದೊರೆಯದೆ ಕವಲು ಹಾದಿಯಲ್ಲಿ ನಿಂತು ಅಸ್ತಿತ್ವದ ಶೋಧದಲ್ಲಿರುವ ಸಂದರ್ಭದಲ್ಲೇ ನಾಗರಿಕ ಸಮಾಜ ಮತ್ತೊಂದು ಪತ್ರಿಕಾ ದಿನವನ್ನು ಆಚರಿಸಿದೆ. ಇಂದಿನ ಸನ್ನಿವೇಶದಲ್ಲಿ ಪತ್ರಿಕೆ ಎಂದರೆ ಅಚ್ಚುಮೊಳೆಯಿಂದ ಡಿಜಿಟಲ್ ತಂತ್ರಜ್ಞಾನದವರೆಗೆ ಪಯಣಿಸಿರುವ ಒಂದು ಜೀವಂತಿಕೆಯ ಸಾಧನ ಎಂದೇ ಭಾವಿಸಬೇಕಾಗುತ್ತದೆ. ಬದಲಾದ ಸಂದರ್ಭಗಳಲ್ಲಿ ಪತ್ರಿಕೆ ಎನ್ನುವ ಪರಿಕಲ್ಪನೆಯೇ ರೂಪಾಂತರಕ್ಕೊಳಗಾಗಿ ವಿಭಿನ್ನ ಆಯಾಮಗಳಲ್ಲಿ ತೆರೆದುಕೊಂಡಿವೆ. ವ್ಯಕ್ತಿನಿಷ್ಠ ವೃತ್ತಿಪರತೆಯಿಂದ ವಸ್ತುನಿಷ್ಠ ವಾಸ್ತವತೆಯವರೆಗೆ ಪತ್ರಿಕಾ ರಂಗ ತನ್ನ ಹಾದಿಯನ್ನು ಕ್ರಮಿಸಿದೆ.

- Advertisement -

ಸುತ್ತಲಿನ ಸಮಾಜದ ಕನ್ನಡಿಯಂತಿದ್ದ ಪತ್ರಿಕಾ ಮಾಧ್ಯಮ ಇಂದು ಈ ಸಮಾಜದಿಂದಾಚೆಗಿನ ಬಾಹ್ಯ ಪ್ರಪಂಚವನ್ನೂ ಆವರಿಸಿರುವ ಒಂದು ಉದ್ಯಮವಾಗಿ ರೂಪಾಂತರಗೊಂಡಿರುವುದನ್ನು ಕಳೆದ ಎರಡು ಮೂರು ದಶಕಗಳಲ್ಲಿ ಕಂಡಿದ್ದೇವೆ. ನಾಗರಿಕ ಸಮಾಜದಲ್ಲಿ ಸಂಭವಿಸುವ ವಿದ್ಯಮಾನಗಳನ್ನು ವರದಿ ಮಾಡುವ ಸಮೂಹ ಮಾಧ್ಯಮಗಳ ಹಂತದಿಂದ ಇಂದು ಪತ್ರಿಕೆಗಳು ಈ ವಿದ್ಯಮಾನಗಳನ್ನು ನಿಷ್ಕರ್ಷೆ ಮಾಡುವ ಹಂತಕ್ಕೆ ಬೆಳೆದುನಿಂತಿವೆ. ವೃತ್ತಿಪರತೆಯ ಚೌಕಟ್ಟಿನಿಂದ ಹೊರಬಂದು ಔದ್ಯಮಿಕ ವಲಯದ ಒಂದು ಭಾಗವಾಗಿ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿವೆ.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಸಮೂಹ ಮಾಧ್ಯಮ ಎದುರಿಸಬಹುದಾದ ಸವಾಲುಗಳು ದಿನ ಕಳೆದಂತೆ ಜಟಿಲವಾಗುತ್ತಲೇ ಇದ್ದರೂ, 1920ರ ದಶಕದ ಮೂಕ ನಾಯಕ ಎದುರಿಸಿದ್ದ ಜಟಿಲ ಪ್ರಶ್ನೆಗಳನ್ನೇ ಇಂದಿನ ಒಂದು ಪತ್ರಿಕೆಯೂ ಎದುರಿಸುತ್ತಿದೆ ಎನ್ನುವುದು ಕಟು ವಾಸ್ತವ. ಅಂದರೆ ಸಾಮಾಜಿಕ ಅಭ್ಯುದಯದ ಹಾದಿಯಲ್ಲಿ ಭಾರತ ತನ್ನೆಲ್ಲಾ ಪೂರ್ವಾಶ್ರಮದ ಪೊರೆಗಳನ್ನು ಕಳಚಿಕೊಂಡಿದೆ ಎಂದು ಎದೆತಟ್ಟಿ ಹೇಳುವ ಆತ್ಮಸ್ಥೈರ್ಯವನ್ನು ಆಧುನಿಕ ಭಾರತದ ಸಮಾಜ ಕಳೆದುಕೊಂಡಿದೆ. ಶ್ರೇಣೀಕೃತ ವ್ಯವಸ್ಥೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಶ್ರಮಿಸುತ್ತಿರುವ ಪತ್ರಿಕೆ ಅಥವಾ ಮಾಧ್ಯಮ ಎನ್ನುವ ಒಂದು ವಿದ್ಯಮಾನ ಇಂದು ಔದ್ಯಮಿಕ ಜಗತ್ತಿನ ಶ್ರೇಣೀಕರಣದ ಮೆಟ್ಟಿಲುಗಳನ್ನೂ ದಾಟುವ ಅನಿವಾರ್ಯತೆಯನ್ನು ಎದುರಿಸುತ್ತಿದೆ.
ಶ್ರೇಷ್ಠತೆಯ ವ್ಯಸನ ಮತ್ತು ಬಂಡವಾಳದ ಪಾರಮ್ಯ ಈ ಎರಡೂ ವಿದ್ಯಮಾನಗಳು ಸಮಾಜದ ಎಲ್ಲ ಸ್ತರಗಳಲ್ಲೂ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ಸಂದರ್ಭದಲ್ಲೇ ಸಮೂಹ ಮಾಧ್ಯಮವೂ ತನ್ನ ಸುಭದ್ರ ನೆಲೆಯನ್ನು ಸಂರಕ್ಷಿಸುವ ಪ್ರಯತ್ನದಲ್ಲಿದೆ. ಇದರ ಒಂದು ಭಾಗವಾಗಿಯೇ ಪತ್ರಿಕೆಗಳು ಮುದ್ರಿತ ರೂಪದಲ್ಲಿ, ಡಿಜಿಟಲ್ ರೂಪದಲ್ಲಿ, ಮೌಖಿಕವಾಗಿ ಜನಸಾಮಾನ್ಯರನ್ನು ತಲುಪುವ ಪ್ರಯತ್ನ ಮಾಡುತ್ತಿವೆ. ಅಸ್ತಿತ್ವದ ಪ್ರಶ್ನೆ ಎದುರಾದಾಗ ಅಸ್ಮಿತೆಗಳ ಚೌಕಟ್ಟಿನಿಂದ ಹೊರಬಂದು ಬಂಡವಾಳ ವ್ಯವಸ್ಥೆಯ ಮಾರುಕಟ್ಟೆಯಲ್ಲಿ ತಮ್ಮ ಗುಟುಕು ಜೀವಕ್ಕಾಗಿ ಹಾತೊರೆಯಬೇಕಾದ ಪರಿಸ್ಥಿತಿಯನ್ನು ಪತ್ರಿಕಾ ಮಾಧ್ಯಮವೂ ಎದುರಿಸುತ್ತಿದೆ.
ನವ ಉದಾರವಾದದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಸಂವಹನ ಮಾಧ್ಯಮವೇ ಮಾರುಕಟ್ಟೆಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಪತ್ರಿಕಾ ವಲಯ ಜನಮಾನಸದ ನಡುವೆ ಸುತ್ತಲಿನ ಸಮಾಜದ ಜಟಿಲ ಸಮಸ್ಯೆಗಳನ್ನು ಬಿಂಬಿಸುವ ಪ್ರಯತ್ನಗಳನ್ನು ಮಾಡುತ್ತಿವೆ. ಸುದ್ದಿ ಬಿತ್ತರಿಸುವ ಕಾಯಕ ವ್ಯಾವಹಾರಿಕ ಸ್ವರೂಪ ಪಡೆದಿರುವುದರಿಂದ ಮಾರುಕಟ್ಟೆಯ ನಿಯಮಗಳು ಮತ್ತು ಈ ಮಾರುಕಟ್ಟೆಯನ್ನು ನಿಯಂತ್ರಿಸುವ ಸಾಂಸ್ಕೃತಿಕ ಜಗತ್ತಿನ ನಿಯಮಗಳು ಸಂವಹನ ಪ್ರಕ್ರಿಯೆಯನ್ನೇ ನಿಯಂತ್ರಿಸುತ್ತವೆ. ಹಾಗಾಗಿಯೇ ಪ್ರಮುಖ ಸುದ್ದಿವಾಹಿನಿಯ ಒಡೆಯರೆಲ್ಲರೂ ರಾಜಾಶ್ರಯಕ್ಕಾಗಿ ಹಾತೊರೆಯುತ್ತಿರುವುದನ್ನು ಗಮನಿಬಹುದು.

- Advertisement -

ಡಿಜಿಟಲ್ ಯುಗದಲ್ಲಿ ಪತ್ರಿಕೆ ಎನ್ನುವ ಪದಕ್ಕೆ ಮಾಧ್ಯಮ ಎಂಬ ಹೆಚ್ಚಿನ ವ್ಯಾಪ್ತಿಯುಳ್ಳ ಪದವನ್ನು ಸಂವಾದಿಯಾಗಿ ಬಳಸುವುದು ಅನಿವಾರ್ಯವೂ ಆಗಿದೆ. ಏಕೆಂದರೆ ಪತ್ರಿಕೆ ತನ್ನ ವೃತ್ತಿಪರತೆಯ ಹಂತವನ್ನು ದಾಟಿ ಔದ್ಯಮಿಕ ವಲಯದ ಒಂದು ಭಾಗವಾಗಿ ರೂಪುಗೊಂಡಿದೆ. ಮಾಧ್ಯಮದ ಒಡೆತನ ಮತ್ತು ಔದ್ಯಮಿಕ ಹಿತಾಸಕ್ತಿಗಳು ಸಮೂಹ ಮಾಧ್ಯಮದ ಎಲ್ಲ ಮಾರ್ಗಗಳಲ್ಲೂ ತಡೆಗೋಡೆಗಳನ್ನು ನಿರ್ಮಿಸಿರುವುದರಿಂದ ಈ ಔದ್ಯಮಿಕ ವಲಯದ ಕಾಲಾಳುಗಳಿಗೆ ಈ ಗೋಡೆಗಳಿಂದಾಚೆಗಿನ ವಾಸ್ತವ ಜಗತ್ತು ಗೋಚರಿಸುತ್ತಿಲ್ಲ. ಕ್ಯಾಮರಾ ಕಣ್ಣುಗಳು ಎಷ್ಟೇ ತೀಕ್ಷ್ಣವಾಗುತ್ತಿದ್ದರೂ ಮಸೂರಗಳನ್ನು ಬಳಸುವ ಕಣ್ಣುಗಳು ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರುತ್ತವೆ.

ಇಲ್ಲಿ ಸ್ವತಂತ್ರ ಮಾಧ್ಯಮದ ಅಸ್ತಿತ್ವವೂ ನಿಷ್ಕರ್ಷೆಯಾಗುತ್ತದೆ. ಇಂದು ಬಹಳ ಚರ್ಚೆಗೊಳಗಾಗುತ್ತಿರುವ ವಿಚಾರ ಎಂದರೆ ಮಾಧ್ಯಮ ಸ್ವಾತಂತ್ರ್ಯ. ಆದರೆ ಸ್ವತಂತ್ರ ಮಾಧ್ಯಮದ ಪರಿಕಲ್ಪನೆಗೆ ಅವಕಾಶವೇ ಇಲ್ಲದ ಒಂದು ಔದ್ಯಮಿಕ ಜಗತ್ತಿನಲ್ಲಿ ಅಲ್ಲಿಂದ ಹೊರಹೊಮ್ಮುವ ಅಭಿವ್ಯಕ್ತಿಗಳು ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಯೋಚಿಸುವುದೂ ಸಹ ಕಷ್ಟವಾಗುತ್ತದೆ. ಪತ್ರಿಕೆಗಳು ಏಕೆ ಹೀಗಾಗಿವೆ ? ಈ ಪ್ರಶ್ನೆ ಎದುರಾದಾಗ ನಾವು ಈ ಔದ್ಯಮಿಕ ಹಿತಾಸಕ್ತಿಯಿಂದಾಚೆಗೆ ಯೋಚಿಸಲೂ ಸಾಧ್ಯವಾಗುವುದಿಲ್ಲ. ಆದರೂ ಈ ಪ್ರಶ್ನೆ ನಾಗರಿಕ ಸಮಾಜವನ್ನು ಕಾಡುವುದು, ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆ ಜನಸಾಮಾನ್ಯರ ಬದುಕಿಗೆ ನೇರ ಮುಖಾಮುಖಿಯಾದ ಸಂದರ್ಭದಲ್ಲಿ ಮಾತ್ರ.

ಈ ಸಂದರ್ಭಗಳಲ್ಲೆಲ್ಲಾ ಇಂದಿನ ಸುದ್ದಿ ಮಾಧ್ಯಮಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳು ಜನತಾ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುತ್ತವೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೆಳಸ್ತರದ ಜನಸಮುದಾಯಗಳಿಗೆ ಈ ಪ್ರಶ್ನೆ ಅನೇಕ ಸಂದರ್ಭಗಳಲ್ಲಿ ನಿರ್ಣಾಯಕವಾಗಿ ಕಾಣುತ್ತದೆ. ಆಡಳಿತ ವ್ಯವಸ್ಥೆ ಮತ್ತು ಬಂಡವಾಳ ಮಾರುಕಟ್ಟೆ ಮಾಧ್ಯಮಗಳ ಅಸ್ತಿತ್ವವನ್ನೂ ನಿರ್ಧರಿಸಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. ಮಾರುಕಟ್ಟೆ ಮತ್ತು ಬಂಡವಾಳ ಮಾಧ್ಯಮ ಸಮೂಹಗಳನ್ನು ನಿಯಂತ್ರಿಸುವಂತೆಯೇ ಸುದ್ದಿಯನ್ನೂ, ಸುದ್ದಿಪ್ರಸರಣವನ್ನೂ ಏಕೆ ನಿಯಂತ್ರಿಸುತ್ತದೆ ಎನ್ನುವುದನ್ನೂ ನಾವು ಒರೆಹಚ್ಚಿ ನೋಡಬೇಕಾಗುತ್ತದೆ.
ಭಾರತದ ಮಾಧ್ಯಮ ಜಗತ್ತು ಈ ಸಂಕೀರ್ಣ ಪರಿಸ್ಥಿತಿಯಲ್ಲಿ ತನ್ನ ಅಸ್ತಿತ್ವವನ್ನು ಸಂರಕ್ಷಿಸಿಕೊಳ್ಳಲು ಆಳುವ ವರ್ಗಗಳೊಡನೆ ಸಂಧಾನ ನಡೆಸುತ್ತಿದೆ. ಅತಿ ಹೆಚ್ಚು ಪ್ರಸಾರವಾಗುವ ಸುದ್ದಿ ಪತ್ರಿಕೆಗಳೂ ಇದೇ ಮಾರುಕಟ್ಟೆ ವ್ಯವಸ್ಥೆಯ ಒಂದು ವಿಭಾಗದಂತೆ ಕಾರ್ಯನಿರ್ವಹಿಸುವುದರಿಂದಲೇ ಅಲ್ಲಿಂದ ಹೊರಬರುವ ಸುದ್ದಿ ಮತ್ತು ವಿಶ್ಲೇಷಣೆಗಳೂ ಬಂಡವಾಳ ಮಾರುಕಟ್ಟೆಗೆ ಪೂರಕವಾಗಿಯೇ ಇರಬೇಕಾಗುತ್ತದೆ. ಮಾಧ್ಯಮ ಸಮೂಹಗಳ ಒಡೆತನ ಈ ಮಾರುಕಟ್ಟೆಯ ತಡೆಗೋಡೆಗಳಿಂದ ದಾಟಿ ಬರಲು ಸಾಧ್ಯವೇ ಆಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ತಾತ್ವಿಕ ನೆಲೆಯಲ್ಲಿ ಜನಸಾಮಾನ್ಯರ ಧ್ವನಿಯಾಗಿ ಉಗಮಿಸಿದ ಅನೇಕ ಸುದ್ದಿಮನೆಗಳೂ, ಅಂತಿಮವಾಗಿ ಈ ಮಾರುಕಟ್ಟೆಯ ಆವರಣದಲ್ಲೇ ಉಸಿರುಗಟ್ಟಿ ಬದುಕುತ್ತಿರುವುದನ್ನು ಕಾಣುತ್ತಿದ್ದೇವೆ.
ಪತ್ರಿಕೆ ಅಥವಾ ಮಾಧ್ಯಮ ತನ್ನ ವೃತ್ತಿ ಧರ್ಮವನ್ನು ಬದಿಗಿಟ್ಟು ಮಾರುಕಟ್ಟೆ ವ್ಯವಸ್ಥೆಯೊಡನೆ ರಾಜಿಯಾದಾಗ ಬಂಡವಾಳದ ಆಧಿಪತ್ಯ ಸಹಜವಾಗಿಯೇ ಬಲಗೊಳ್ಳುತ್ತದೆ. ಶಾಸನಬದ್ಧ ಆಡಳಿತ ವ್ಯವಸ್ಥೆ ಸಾಂವಿಧಾನಿಕ ಚೌಕಟ್ಟಿನಲ್ಲೇ ಬಂಡವಾಳಶಾಹಿಯ ಕ್ರೌರ್ಯವನ್ನು ಸಾರ್ವತ್ರೀಕರಿಸಿದಾಗ, ಈ ವ್ಯವಸ್ಥೆಯನ್ನೇ ಆಶ್ರಯಿಸಿ ಬೆಳೆಯಬೇಕಾದ ಒಂದು ಉದ್ಯಮ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುತ್ತದೆ. ಉದ್ಯಮವೇ ಆಗಿರುವ ಮಾಧ್ಯಮ ಜಗತ್ತೂ ಇದಕ್ಕೆ ಹೊರತಾದದ್ದಲ್ಲ. ಹಾಗಾಗಿಯೇ ಸಂವೇದನಾಶೀಲ, ಸಮಾಜಮುಖಿ ಮಾನವ ಸಂಪನ್ಮೂಲಗಳ ಹೊರತಾಗಿಯೂ ಮಾಧ್ಯಮ ಲೋಕ ಆಡಳಿತ ವ್ಯವಸ್ಥೆಯನ್ನೇ ಪುಷ್ಟೀಕರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ.

ಇಲ್ಲಿ ಒಡೆತನದ ಮಾರುಕಟ್ಟೆ ಧರ್ಮ ಮತ್ತು ಸಂಪಾದಕೀಯ ವಲಯದ ವೃತ್ತಿ ಧರ್ಮದ ನಡುವೆ ಸಂಘರ್ಷ ಏರ್ಪಡುತ್ತದೆ. ಹಿತಾಸಕ್ತಿಗಳ ಸಂಘರ್ಷವನ್ನು ಬದಿಗಿಟ್ಟು ನೋಡಿದಾಗಲೂ ಇಲ್ಲಿ ಪತ್ರಿಕಾ ವಲಯದ ಮೌಲ್ಯಗಳು ಔದ್ಯಮಿಕ ಮೌಲ್ಯಗಳೊಡನೆ ರಾಜಿಯಾಗುವುದನ್ನು ಕಾಣಬಹುದು. ಒಡೆತನದ ಹಿತಾಸಕ್ತಿಗಳು ಮಾಧ್ಯಮದ ಸ್ವತಂತ್ರ ನಿಲುಮೆಗಳನ್ನು ಭೂಗತವಾಗಿಯೇ ಇರಿಸಲು ಯತ್ನಿಸುತ್ತವೆ. ನಾಶಪಡಿಸುವುದಿಲ್ಲ. ಏಕೆಂದರೆ, ಅಸ್ತಿತ್ವದ ಪ್ರಶ್ನೆ ಬಂದಾಗ ಇದೇ ಸ್ವತಂತ್ರದ ನಿಲುಮೆಯೇ ಚಿಮ್ಮಿ ಹೊರಬರಬೇಕಾದ ಸಂಭವಗಳೂ ಎದುರಾಗುತ್ತವೆ. ಅಧಿಕಾರ ರಾಜಕಾರಣದ ಒತ್ತಡಗಳು ಮತ್ತು ಅಸ್ತಿತ್ವದ ಅನಿವಾರ್ಯತೆಗಳು, ಮಾಧ್ಯಮದ ಅಸ್ಮಿತೆಗಳನ್ನು ನೇಪಥ್ಯಕ್ಕೆ ಸರಿಸಿಬಿಡುತ್ತವೆ.

ಈ ಅನಿವಾರ್ಯತೆಗಳ ನಡುವೆಯೇ ಕಾರ್ಯನಿರ್ವಹಿಸುವ ಸಂಪಾದಕೀಯ ವಲಯ ತನ್ನ ವ್ಯಕ್ತಿನಿಷ್ಠ ನಿಲುಮೆಗಳನ್ನು ಬದಿಗಿಟ್ಟು ವಸ್ತುನಿಷ್ಠ ಬಾಹ್ಯ ಜಗತ್ತಿನ ವಾಸ್ತವಗಳಿಗೆ ಮುಖಾಮುಖಿಯಾಗಬೇಕಾಗುತ್ತದೆ. ವೃತ್ತಿ ಧರ್ಮ, ಪತ್ರಿಕಾ ಮೌಲ್ಯ ಮತ್ತು ಅಕ್ಷರ ಜಗತ್ತಿನ ಮೌಲ್ಯಗಳ ಸಮಾಧಿಯಾಗುವುದು ಈ ಸಂಘರ್ಷದಲ್ಲೇ. ಇಂದಿನ ಮಾಧ್ಯಮ ಜಗತ್ತು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿರುವುದೂ ಈ ಕಾರಣಕ್ಕಾಗಿಯೇ. ತನ್ನ ಸ್ವತಂತ್ರ ನೆಲೆಯನ್ನೇ ಕಳೆದುಕೊಂಡಿರುವ ಮಾಧ್ಯಮ ಜಗತ್ತು ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ಹಂಬಲಿಸುವುದಾದರೂ ಹೇಗೆ ?

ಈ ಸಂಕೀರ್ಣ ಸಂದರ್ಭದಲ್ಲೇ ಭಾರತದ ಮಾಧ್ಯಮ ಜಗತ್ತು, ಪತ್ರಿಕಾ ವಲಯ ಮತ್ತು ಇವತ್ತಿನ ಪತ್ರಿಕೋದ್ಯಮ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳುವ ಪ್ರಯತ್ನಗಳಲ್ಲಿ ತೊಡಗಿದೆ. ಆಡಳಿತ ವ್ಯವಸ್ಥೆಯನ್ನು ಎಷ್ಟೇ ಅವಲಂಬಿಸಿದ್ದರೂ ಪತ್ರಿಕಾ ವಲಯ ತನ್ನದೇ ಆದ ಮೌಲ್ಯಯುತ ತಾತ್ವಿಕ ನಿಲುಮೆಗಳನ್ನು ಕಾಪಾಡಿಕೊಂಡು ಜನಸಾಮಾನ್ಯರಿಗೆ ಸ್ಪಂದಿಸುವ ಅನಿವಾರ್ಯತೆ ಎಂದಿಗಿಂತಲೂ ಇಂದು ಹೆಚ್ಚಾಗಿದೆ. ಅಧಿಕಾರ ರಾಜಕಾರಣದ ಹಿತಾಸಕ್ತಿಗಳನ್ನೇ ಪ್ರತಿನಿಧಿಸುತ್ತಾ ತಮ್ಮ ಮೂಲ ಅಸ್ತಿತ್ವದ ಸಂರಕ್ಷಣೆಗಾಗಿ ಪತ್ರಿಕೋದ್ಯಮದ ಮೌಲ್ಯಗಳನ್ನೂ ವರ್ಜಿಸಿ ಅಸ್ಮಿತೆಗಳ ಜಗತ್ತಿಗೆ ಸ್ಪಂದಿಸುತ್ತಿರುವ ವಿದ್ಯುನ್ಮಾನ ಮಾಧ್ಯಮಗಳು ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಈ ಸಂದಿಗ್ಧತೆ ಮತ್ತು ಜಿಜ್ಞಾಸೆಯ ನಡುವೆಯೇ ಇಂದಿನ ಸುದ್ದಿ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮ ಮತ್ತು ಇತರ ಸಮೂಹ ಮಾಧ್ಯಮಗಳ ಸಂಪಾದಕೀಯ ವಲಯ ತನ್ನ ಕಾರ್ಯ ನಿರ್ವಹಿಸಬೇಕಿದೆ. ಈ ಕಾರಣಕ್ಕಾಗಿಯೇ ವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳಲು ಇಚ್ಛಿಸದ ಹಲವಾರು ಪತ್ರಿಕೋದ್ಯಮ ಮಿತ್ರರು ಇಂದು ತಮ್ಮದೇ ಆದ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕಿದೆ. ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಅಂಕಣ ಬರೆಯುವವರಿಗೂ ಸಹ ಈ ಮುಜುಗರದ ಸನ್ನಿವೇಶ ಎದುರಾಗುತ್ತಿದೆ. ಒಂದು ನಿರ್ದಿಷ್ಟ ತಾತ್ವಿಕ ನಿಲುಮೆಗಳಿಗೆ ಬದ್ಧತೆ ತೋರಿದಂತಹ ಸುದ್ದಿವಾಹಕ ಮಾಧ್ಯಮಗಳು ಕೊಂಚ ಅತ್ತಿತ್ತ ಸರಿದರೂ, ವಾಚಕರಿಗೆ, ವೀಕ್ಷಕರಿಗೆ ಕಸಿವಿಸಿ ಉಂಟಾಗುವಂತಹ ಒಂದು ಸಾರ್ವಜನಿಕ ಮನಸ್ಥಿತಿಯನ್ನೂ ನಾವು ಕಾಣುತ್ತಿದ್ದೇವೆ.
ಆತ್ಮನಿರ್ಭರ ಭಾರತ ಇಂದು ಸಂಸ್ಕೃತಿಗಳ ಸಂಘರ್ಷವನ್ನು ಎದುರಿಸುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಕಾರ್ಪೋರೇಟ್ ಕೊಳ್ಳುಬಾಕ ಸಂಸ್ಕೃತಿ ಮತ್ತು ಭಾರತೀಯ ಸಮಾಜದ ಜನಸಂಸ್ಕೃತಿಯ ಈ ಸಂಘರ್ಷದಲ್ಲಿ, ಈ ದೇಶದ ಬಹುತ್ವ ಮತ್ತು ಬಹುಮುಖಿ ಸಂಸ್ಕೃತಿಯನ್ನು ನಿರಾಕರಿಸುವ ಶಕ್ತಿಗಳು ಮೇಲುಗೈ ಸಾಧಿಸಿವೆ. ಈ ಶಕ್ತಿಗಳು ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಸಂರಕ್ಷಿಸಿಕೊಳ್ಳಲು ಬಂಡವಾಳ ಮತ್ತು ಮಾರುಕಟ್ಟೆಯ ಸಾರಥ್ಯ ವಹಿಸಿವೆ. ಭಾರತದ ಮಾಧ್ಯಮ ಜಗತ್ತು ಮುದ್ರಣದಿಂದ ಡಿಜಿಟಲ್ ಸ್ಟುಡಿಯೋವರೆಗೆ ಈ ಸಾರಥಿಗಳ ಆಧಿಪತ್ಯಕ್ಕೊಳಪಟ್ಟಿರುವುದು ದುರಂತವಾದರೂ ಸತ್ಯ.

ಕಾರ್ಪೋರೇಟ್ ಬಂಡವಾಳ ಮತ್ತು ಜಾಗತಿಕ ಮಾರುಕಟ್ಟೆಯ ಸಾರಥ್ಯದಿಂದ ವಿಮುಖರಾಗಿ ಕೆಳಸ್ತರದ ಸಮಾಜದ, ನೊಂದ ಸಮುದಾಯಗಳ ಮತ್ತು ಶೋಷಿತ ಜನಸಮುದಾಯಗಳ ನಿತ್ಯ ಬದುಕಿಗೆ ಮುಖಾಮುಖಿಯಾಗಿ ಸತ್ಯದ ಮೇಲೆ ಬೆಳಕು ಚೆಲ್ಲುವ ಮನಸುಗಳು ಈ ಮಾರುಕಟ್ಟೆ ಜಗುಲಿಯಲ್ಲಿ ಬಹಿಷ್ಕೃತವಾಗಿಬಿಡುತ್ತಿವೆ. ಎಫ್‌ ಐ ಆರ್‌ ಗಳ ನಡುವೆ, ರಾಜದ್ರೋಹದ ಆರೋಪಗಳ ನಡುವೆ ನಿರಂತರ ಭೀತಿಯಿಂದಲೇ ಕಾರ್ಯನಿರ್ವಹಿಸುತ್ತಿರುವ ಮತ್ತು ಈಗಾಗಲೇ ಸೆರೆವಾಸ ಅನುಭವಿಸುತ್ತಿರುವ ಮಾಧ್ಯಮ ಮಿತ್ರರು, ಸಂವೇದನಾಶೀಲ ಮನಸುಗಳು ಇಂದು ತಮ್ಮ ವೃತ್ತಿ ಧರ್ಮವನ್ನು ಸಂರಕ್ಷಿಸಿಕೊಳ್ಳಲು ತಮ್ಮದೇ ಆದ ಸಂವಹನ ಮಾರ್ಗಗಳನ್ನು ಅರಸಿಕೊಳ್ಳಬೇಕಿದೆ.

ಕವಲು ಹಾದಿಯಲ್ಲಿರುವ ಆತ್ಮನಿರ್ಭರ ಭಾರತಕ್ಕೆ ಇಂದು ಈ ಮನಸುಗಳ ಅವಶ್ಯಕತೆ ಇದೆ. ಜಾತಿ ದೌರ್ಜನ್ಯ ಮತ್ತು ತಾರತಮ್ಯ, ಅಸ್ಪಶ್ಯತೆ, ಮಹಿಳೆಯರ ಮೇಲಿನ ದೌರ್ಜನ್ಯ, ಶ್ರಮಜೀವಿಗಳ ಅತಂತ್ರ ಬದುಕು, ಬಡವ ಶ್ರೀಮಂತರ ಅಂತರದಲ್ಲಿ ಹೆಚ್ಚಳ ಹೀಗೆ ಭಾರತ ಎರಡು ಮಜಲುಗಳಲ್ಲಿ ಪ್ರಕಟಗೊಳ್ಳುತ್ತಿದೆ. ಕಣ್ಣೆದುರಿನ ಅನ್ಯಾಯಗಳನ್ನೂ ಗುರುತಿಸದಂತಹ ಒಂದು ಸಾಮಾಜಿಕ ವ್ಯವಸ್ಥೆಯನ್ನು ಸಾರ್ವತ್ರೀಕರಿಸಲಾಗುತ್ತಿದೆ. ಮತ್ತೊಂದೆಡೆ ದೌರ್ಜನ್ಯ ಮತ್ತು ಶೋಷಣೆಗಳಿಗೆ ಸಂಪೂರ್ಣ ವಿಮುಖವಾಗುವ ಮನಸುಗಳನ್ನೂ ನಾಗರಿಕ ಸಮಾಜ ಸೃಷ್ಟಿಸಿದೆ. ಈ ಜಟಿಲ ಪ್ರಶ್ನೆಯನ್ನು ಶೋಧಿಸುವ ಪ್ರಯತ್ನವನ್ನಾದರೂ ಮಾಡಬಹುದಾದ ಸಂವಹನ ಮಾಧ್ಯಮದ ಶೋಧದಲ್ಲಿ ಭಾರತ ತೊಡಗಿದೆ.

ದುರಂತ ಎಂದರೆ ಸ್ಥಾಪಿತ ಮಾಧ್ಯಮ ಲೋಕ, ಪತ್ರಿಕಾ ಜಗತ್ತು ಮತ್ತು ಸಂವಹನದ ಮಾರ್ಗಗಳು ಈ ಶೋಧದಲ್ಲಿ ತೊಡಗಲೂ ಹಿಂಜರಿಯುವಂತಹ ಪರಿಸ್ಥಿತಿಯನ್ನು ಆಳುವ ವರ್ಗಗಳು ಸೃಷ್ಟಿಸಿವೆ. ಈ ಪರಿಸ್ಥಿತಿಯನ್ನು ಸೃಷ್ಟಿಸಲು ಸಾಂವಿಧಾನಿಕ ಮಾರ್ಗಗಳನ್ನೇ ಅನುಸರಿಸಲಾಗುತ್ತಿದೆ. ಅಪಾಯದ ತೂಗುಗತ್ತಿಯ ಛಾಯೆಯಲ್ಲೇ ಕಾರ್ಯನಿರ್ವಹಿಸಬೇಕಾದ ಪತ್ರಿಕೋದ್ಯಮ ವಸ್ತುಶಃ ಉದ್ಯಮವೇ ಆಗಿರುವುದಕ್ಕೆ ಇದೂ ಒಂದು ಕಾರಣ ಎನ್ನಬಹುದು. ಈ ಔದ್ಯಮಿಕ ಹಿತಾಸಕ್ತಿಗಳ ನಡುವೆಯೇ ಭಾರತದ ಪತ್ರಿಕಾರಂಗ ತನ್ನ ಕಳೆದುಹೋದ ಹೆಜ್ಜೆಗಳನ್ನು ಪುನಃ ಶೋಧಿಸಿ, ಗುರುತಿಸಿ ಅಲ್ಲಿ ಅಡಗಿರಬಹುದಾದ ಮೌಲ್ಯಗಳನ್ನು ಅಳವಡಿಸಿಕೊಳ್ಳುವತ್ತ ಯೋಚಿಸಬೇಕಿದೆ. ಈ ವಿಚಾರಗಳು, ನಮ್ಮ ನಡುವಿನ ಸಂವೇದನಾಶೀಲ, ಕ್ರಿಯಾಶೀಲ ಮತ್ತು ವೈಚಾರಿಕ ಮನಸಿನ ಯುವ ಪತ್ರಕರ್ತರನ್ನು, ಪತ್ರಿಕಾರಂಗದ ಮಿತ್ರರನ್ನು ಮತ್ತು ಸಮಾಜಮುಖಿ ಎಂದು ಗುರುತಿಸಿಕೊಳ್ಳುವ ಪತ್ರಿಕೋದ್ಯಮಿಗಳನ್ನೂ ಕಾಡಬೇಕಿದೆ.



Join Whatsapp