ಬೆಂಗಳೂರು : ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಕಾರವಾಗಿ ಮಳೆ ಸುರಿಯುತ್ತಿದೆ. ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.
ಕೊಡಗು ಜಿಲ್ಲೆಯಾದ್ಯಂತ ಇಂದು ಬೆಳಗ್ಗಿನಿಂದಲೇ ಮಳೆ ಬೀಳುತ್ತಿದೆ. ಭಾಗಮಂಡಲದಲ್ಲಿ 21 ಮಿಲಿಮೀಟರ್ ಮಳೆಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಈವರೆಗೆ 47 ಮಿಲಿ ಮೀಟರ್ ಮಳೆಯಾಗಿದೆ. 2 ಸಾವಿರದ 859 ಅಡಿ ಸಂಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ 2 ಸಾವಿರದ 846 ಅಡಿ ನೀರಿನ ಸಂಗ್ರಹವಿದ್ದು 3 ಸಾವಿರದ 600 ಕ್ಯೂಸೆಕ್ ನೀರಿನ ಒಳಹರಿವಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿದ್ದು, ಉತ್ತರ ಒಳನಾಡಿನಲ್ಲಿ ಸಾಮಾನ್ಯ ಸ್ಥಿತಿಯಲ್ಲಿದೆ.
ಕರಾವಳಿಯ ಬಹುತೇಕ ಕಡೆ ಮಳೆಯಾಗಿದ್ದು, ಉತ್ತರ ಒಳನಾಡಿನ ಹಲವೆಡೆ ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಬಿದ್ದಿದೆ. ರಾಜ್ಯದಲ್ಲಿ ಅತಿ ಹೆಚ್ಚು ಶಿರಾಳಿ ಮತ್ತು ಭಟ್ಕಳದಲ್ಲಿ ತಲಾ 12 ಸೆಂಟಿಮೀಟರ್‌ನಷ್ಟು ಮಳೆಯಾಗಿದೆ. ಉಳಿದಂತೆ ಕುಂದಾಪುರ, ಕೋಟಾ, ಕಾರವಾರ ತಲಾ 11, ಮಂಕಿ 10, ಗೋಕರ್ಣ, ಆಗುಂಬೆಯಲ್ಲಿ 9 ಹೊನ್ನಾವರ 8, ಸಿದ್ಧಾಪುರ, ಮೂಡುಬಿದಿರೆಯಲ್ಲಿ ತಲಾ 7 ಸೆಂಟಿಮೀಟರ್‌ನಷ್ಟು ಮಳೆ ಬಿದ್ದಿದೆ.
ಮುನ್ಸೂಚನೆಯಂತೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ. ಬೆಂಗಳೂರು ಮತ್ತು ಸುತ್ತಮುತ್ತ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿದ್ದು, ಕೆಲ ಭಾಗಗಳಲ್ಲಿ ದಿಡೀರ್ ಮಳೆಯಾಗುವ ಸಂಭವ. ತಾಪಮಾನ ಗರಿಷ್ಠ 27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ನಿರೀಕ್ಷೆಯಿದೆ.