ಚೆನ್ನೈ: ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಚಿನ್ನವೀರಮಂಗಳಂ ಎಂಬ ಕುಗ್ರಾಮ ಇದೀಗ ಭಾರತ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ‘ವಿಲೇಜ್ ಕುಕಿಂಗ್ ‘ ಎಂಬ ಯೂಟ್ಯೂಬ್ ಚಾನಲ್ ಮೂಲಕ ತಮ್ಮ ಗ್ರಾಮದ ಹೆಸರನ್ನು ವಿಶ್ವದ ಮೂಲೆ ಮೂಲೆಗೂ ಪರಿಚಯಿಸುವಲ್ಲಿ ಅಲ್ಲಿನ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.
ಯೂಟ್ಯೂಬ್ನಲ್ಲಿ ಅಡುಗೆ ಕಾರ್ಯಕ್ರಮಗಳಿಗೆ ತುಂಬಾ ಬೇಡಿಕೆ ಇದೆ ಎಂಬುದನ್ನು ತಿಳಿದುಕೊಂಡಿದ್ದ ಸುಬ್ರಮಣಿ ಈ ಯೋಚನೆಯನ್ನು ಹಾಕಿದರು, ಸಂಬಂಧಿಗಳಾದ ಪೆರಿಯತಂಬಿ, ವಿ. ಮುರುಗೇಶನ್, ವಿ. ಅಯ್ಯನಾರ್, ಜಿ. ತಮಿಳ್ ಸೆಲ್ವನ್, ಟಿ. ಮುತ್ತು ಮಾನಿಕ್ಕಂ ಜೊತೆ ಸೇರಿ ಒಂದು ತಂಡವನ್ನು ಕಟ್ಟಿದರು.
ಅಡುಗೆಗೆ ಹಾಕುವ ಪ್ರತಿಯೊಂದು ಪದಾರ್ಥವನ್ನು ಕೂಗಿ ಕೂಗಿ ಹೇಳುವ ಮೂಲಕ ಹೊಸ ಟ್ರೆಂಡ್ ಅನ್ನು ಚಾನಲ್ ಸೃಷ್ಟಿ ಮಾಡಿತ್ತು. ಇದು ವಿಡಿಯೋ ರೆಕಾರ್ಡಿಂಗ್ನಲ್ಲಿ ಸೃಜನಶೀಲತೆಯನ್ನು ತೋರಿಸಲಾರಂಭಿಸಿತ್ತು. ಈ ತಂತ್ರ ಸಾಮಾನ್ಯವಾಗಿ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಈ ಅಡುಗೆ ಚಾನೆಲ್ ನ ಚಂದಾದಾರರ ಸಂಖ್ಯೆ 1 ಕೋಟಿ ದಾಟಿದೆ. ಅಡುಗೆ ವೀಡಿಯೋ ಅಪ್ಲೋಡ್ ಮಾಡುತ್ತಿದ್ದ ನಮಗೆ ವಾರಕ್ಕೆ 10 ಸಾವಿರ ಚಂದಾದಾರರು ಸಿಗುತ್ತಿದ್ದರು. ಅಸೆಂಬ್ಲಿ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ತಂಡವನ್ನು ಭೇಟಿ ಮಾಡಿದ್ದು, ತದ ನಂತರ ಚಂದಾದಾರರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂತು ಎಂದು ಚಾನೆಲ್ ಸದಸ್ಯರು ಹೇಳಿದರು.
ರಾಹುಲ್ ಭೇಟಿ ಬಳಿಕ ಚಂದಾದಾರರ ಸಂಖ್ಯೆ ವಾರಕ್ಕೆ 40 ಸಾವಿರಕ್ಕೇರಿತು. ಅಲ್ಲದೆ ತಂಡದ ನಿರ್ವಾಹಕ ಸುಬ್ರಮಣಿ ನೀಡುವ ಮಾಹಿತಿಯಂತೆ ಒಂದು ತಿಂಗಳಿಗೆ ಇವರು ಯೂಟ್ಯೂಬ್ ಮೂಲಕವೇ 7 ರಿಂದ 8 ಲಕ್ಷ ಹಣ ಗಳಿಸುತ್ತೇವೆ. ಈ ಪೈಕಿ 1 ರಿಂದ 2 ಲಕ್ಷ ರೂ ಯೂಟ್ಯೂಬ್ ವಿಡಿಯೋ ಮಾಡಲು ಖರ್ಚಾದರೆ ಉಳಿದ ಹಣವನ್ನು ತಂಡದ ಸದಸ್ಯರು ಹಂಚಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.