ಕೋಲ್ಕತ್ತಾ: ಭಾರತ ಸಂವಿಧಾನದ 169 ನೇ ವಿಧಿ ಅನ್ವಯ ಪಶ್ಚಿಮ ಬಂಗಾಳ ವಿಧಾನಸಭೆಯು ರಾಜ್ಯದಲ್ಲಿ ವಿಧಾನ ಪರಿಷತ್ ರಚಿಸುವ ನಿರ್ಣಯವನ್ನು ಮಂಗಳವಾರ (ಜುಲೈ 6) ಅಂಗೀಕರಿಸಿದೆ.
ನಿರ್ಣಯವನ್ನು ಅಂಗೀಕರಿಸುವ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಹಾಜರಿದ್ದ ಒಟ್ಟು 265 ಸದಸ್ಯರಲ್ಲಿ 196 ಶಾಸಕರು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, 69 ಮಂದಿ ಇದರ ವಿರುದ್ಧ ಮತ ಚಲಾಯಿಸಿದ್ದಾರೆ.
ಸುವೇಂದು ಅಧಿಕಾರಿ ಎದುರು ಸೋತ ಮಮತಾ ಬ್ಯಾನರ್ಜಿ ಆರು ತಿಂಗಳೊಳಗೆ ಶಾಸಕಿಯಾಗದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದ್ದು, ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಕೆಳಗಿಳಿಸಲು ತಂತ್ರ ರೂಪಿಸಿ ಉಪಚುನಾವಣೆ ನಡೆಸದೆ ಹಿಂದೇಟು ಹಾಕುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಹೊರಟಿರುವ TMC ಸರ್ಕಾರ ವಿಧಾನ ಪರಿಷತ್ ರಚನೆಗೆ ಮುಂದಾಗಿದೆ ಎಂದು ಹೇಳಲಾಗಿದೆ.
ಈಗ ಆಂಧ್ರ ಪ್ರದೇಶ, ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರ ಪ್ರದೇಶ ಸೇರಿ ದೇಶದ ಒಟ್ಟು ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ ಇದೆ. ಉಳಿದ ಕಡೆ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಶಾಸಕಾಂಗದಲ್ಲಿ ಸ್ಥಾನ ಪಡೆಯಬಹುದಾಗಿದೆ.
ವಿಧಾನ ಪರಿಷತ್ ನಿರ್ಣಯ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಂಗೀಕಾರವಾದರೂ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಬೇಕಾಗುತ್ತದೆ. ಈ ವಿಷಯದಲ್ಲಿ NDA ಸರ್ಕಾರದ ಪಾತ್ರ ನಿರ್ಣಾಯಕವಾಗಲಿದೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಿರೋಧ ಪಕ್ಷ ನಾಯಕ ಸುವೇಂಧು ಅಧಿಕಾರಿ, ವಿಧಾನಸಭಾ ಚುನಾವಣೆಯಲ್ಲಿ ಸೋತ TMC ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ವಿಧಾನ ಪರಿಷತ್ ರಚಿಸುವ ಮೂಲಕ ಈ ರೀತಿ ತಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.