ನಾಳೆ ಬಾಬ್ರಿ ಧ್ವಂಸ ತೀರ್ಪು: ವಿಚಾರಣೆ ಕುರಿತು ತಿಳಿಯಲೇಬೇಕಾದ ವಿಷಯಗಳು

Prasthutha|

- Advertisement -

➤ 28 ವರ್ಷಗಳ ವಿಚಾರಣೆ

- Advertisement -

ಶಿಕ್ಷಿಸಲ್ಪಡಲಿದ್ದಾರೆಯೇ ಧ್ವಂಸದ ಪಿತೂರಿಕೋರರು

➤ಧ್ವಂಸ ಒಂದು ಅಪರಾಧ ಕೃತ್ಯ – ಪ್ರಭಾವ ಬೀರಲಿದೆಯೇ ಸುಪ್ರೀಂ ತೀರ್ಪು

ಹೊಸದಿಲ್ಲಿ:  ಅಯೋಧ್ಯೆಯಲ್ಲಿ ಬಾಬ್ರಿ ಮಸ್ಜಿದ್ ಧ್ವಂಸಗೊಂಡ 28 ವರ್ಷಗಳ ಬಳಿಕ ಲಕ್ನೊದ ವಿಶೇಷ ಸಿಬಿಐ ನ್ಯಾಯಾಲಯವು ನಾಳೆ ಈ ಅಪರಾಧ ಪ್ರಕರಣದ ತೀರ್ಪು ನೀಡುವ ನಿರೀಕ್ಷೆಯಿದೆ.

ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಮತ್ತು ಅವರ ಸಹ ನಾಯಕರುಗಳಾದ ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ವಿನಯ್ ಕಠಿಯಾರ್ ಮತ್ತು ಸಾಕ್ಷಿ ಮಹಾರಾಜ್ ಹಾಗೂ ಇತರರನ್ನೊಳಗೊಂಡಂತೆ 32 ಆರೋಪಿಗಳು ವಿಚಾರಣೆ ಎದುರಿಸುತ್ತಿದ್ದರು.

ಇದೀಗ ವಿಚಾರಣೆಯು ಪೂರ್ಣಗೊಂಡಿರುವುದರಿಂದ ಪ್ರಕರಣದ ವಿವರಗಳನ್ನು ಇಲ್ಲಿ ನೀಡಲಾಗಿದೆ. ಹಲವು ಅಡೆತಡೆಗಳು ಮತ್ತು ಕಾರಣಗಳಿಂದ ವಿಚಾರಣೆಯು  ಸುಮಾರು ಮೂರು ದಶಕಗಳ ತನಕ ವಿಳಂಬವಾಗಿದೆ.

ಎಫ್.ಐ.ಆರ್ ಮತ್ತು ತನಿಖೆ:

ಶ್ರೀರಾಮನ ಜನ್ಮಸ್ಥಾನದಲ್ಲಿ ಬಾಬ್ರಿ ಮಸ್ಜಿದ್ ನಿರ್ಮಿಸಲಾಗಿದೆ ಎಂಬ ಆರೋಪದೊಂದಿಗೆ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. ಧ್ವಂಸದ ಬಳಿಕ ದೇಶದಾದ್ಯಂತ ಕೋಮುಗಲಭೆಗಳು ಸಂಭವಿಸಿದ್ದು ಸರಕಾರಿ ಅಂಕಿಅಂಶಗಳ ಪ್ರಕಾರ 1800 ಮಂದಿ ಸಾವನ್ನಪ್ಪಿದ್ದರು. ನವೆಂಬರ್ 2019ರಲ್ಲಿ ಸುಪ್ರೀಂ ಕೋರ್ಟ್ ರಾಮಜನ್ಮಭೂಮಿ ಮಂದಿರದ ಪರವಾಗಿ ತೀರ್ಪು ನೀಡಿತ್ತು. ನಂತರ ಕಳೆದ ತಿಂಗಳು ಆ.5ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸವನ್ನು ಮಾಡಿದ್ದರು.

1992ರ ಡಿಸೆಂಬರ್ ನಲ್ಲಿ ಮಸೀದಿ ಧ್ವಂಸದ ಬಳಿಕ ಪೊಲೀಸರು ಎರಡು ಎಫ್.ಐ.ಆರ್ ಗಳನ್ನು ದಾಖಲಿಸಿದ್ದರು. ಮೊದಲ ಎಫ್.ಐ.ಆರ್ ಸಂಖ್ಯೆ 197/92 ರಲ್ಲಿ ಲಕ್ಷಾಂತರ ಮಂದಿ ಅನಾಮಿಕ ಕರಸೇವಕರು ಮಸೀದಿಯ ಮೇಲೆ ಹತ್ತಿ ಸುತ್ತಿಗೆ ಮತ್ತು ಕೊಡಲಿಗಳನ್ನು ಬಳಸಿ ಧ್ವಂಸಗೊಳಿಸಿದ್ದರೆಂದು ತಿಳಿಸಲಾಗಿತ್ತು. ಎರಡನೆ ಎಫ್.ಐ.ಆರ್ ಅನ್ನು ಬಿಜೆಪಿ ಯ ಅಡ್ವಾಣಿ, ಜೋಶಿ, ಭಾರ್ತಿ ಮತ್ತು ವಿನಯಕಟಿಯಾರ್ ಮತ್ತು ವ್ಫಿಶ್ವ ಹಿಂದೂ ಪರಿಷತ್ ನ ಅಶೋಕ್ ಸಿಂಘಲ್, ಗಿರಿರಾಜ್ ಕಿಶೋರ್, ವಿಷ್ಣು ಹರಿ ದಾಲ್ಮಿಯ ಮತ್ತು ಸಾಧ್ವಿ ರಿತಂಬರ ವಿರುದ್ಧ ಮಾಡಲಾಗಿದೆ. ಇವರಲ್ಲಿ ದಾಲ್ಮಿಯಾ, ಕಿಶೋರ್ ಮತ್ತು ಸಿಂಘಲ್ ಸಾವನ್ನಪ್ಪಿದ್ದಾರೆ.

ಪತ್ರಕರ್ತರ ಮೇಲೆ ದಾಳಿ ನಡೆಸಿದ್ದಕ್ಕಾಗಿ ಇತರ 47 ಎಫ್.ಐ.ಆರ್ ಗಳನ್ನು ದಾಖಲಿಸಲಾಗಿತ್ತು.

ಸಿಬಿಐ ಮತ್ತು ಉತ್ತರ ಪದೇಶ ದ ಸಿಐಡಿ ಮಧ್ಯೆ ಪ್ರಕರಣಗಳನ್ನು ಹಂಚುವಾಗ ಮೊದಲ ಸಮಸ್ಯೆ ಉದ್ಭವಿಸಿತ್ತು. ಕರಸೇವಕರ ವಿರುದ್ಧದ ಎಫ್.ಐ.ಆರ್ ಅನ್ನು ಸಿಬಿಐಗೆ ವರ್ಗಾಯಿಸಲಾದರೆ ಬಿಜೆಪಿ-ವಿ.ಎಚ್.ಪಿ ನಾಯಕರ ಎಫ್.ಐ.ಆರ್ ಅನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು.

1993ರ ಆ.27ರಂದು ಮಾತ್ರವೇ ಯುಪಿ ಸರಕಾರ ಎಲ್ಲಾ ಪ್ರಕರಣವನ್ನು ಸಿ.ಬಿ.ಐಗೆ ಹಸ್ತಾಂತರಿಸಿತ್ತು.

ಸಂಚು:

ಅಕ್ಟೊಬರ್ 5, 1993ರಲ್ಲಿ ಸಿಬಿಐ ಎಂಟು ನಾಯಕರನ್ನೊಳಗೊಂಡಂತೆ 40 ಮಂದಿಯ ವಿರುದ್ಧ ಚಾರ್ಜ್ ಶೀಟನ್ನು ಸಲ್ಲಿಸಿತು. 1996ರ ಜನವರಿ 10ರಂದು ಸಿಬಿಐ ಬಾಬ್ರಿ ಮಸ್ಜಿದ್ ವಿರುದ್ಧ ದೊಡ್ಡ ಸಂಚು ರೂಪಿಸಿದ ಕುರಿತು ಮತ್ತು ಪೂರ್ವಯೋಜಿತ ದಾಳಿ ನಡೆಸಿರುವುದಾಗಿ  ಹೆಚ್ಚುವರಿ ಚಾರ್ಜ್ ಶೀಟನ್ನು ಸಲ್ಲಿಸಿತ್ತು.

ಶಿವಸೇನಾ ನಾಯಕ ಬಾಳ ಠಾಕ್ರೆ ಮತ್ತು ಮೊರೇಶ್ವರ್ ಸಾವೆಯನ್ನೊಳಗೊಂಡಂತೆ 9 ಮಂದಿ ನಾಯಕರ ವಿರುದ್ಧ ಭಾರತೀಯ ದಂಡ ಸಂಹಿತೆಯ 120 (ಬಿ) ವಿಧಿಯಡಿ ಅಪರಾಧ ಸಂಚು ನಡೆಸಿದ ಆರೋಪನ್ನು ಸೇರಿಸಿತ್ತು.

1997ರಲ್ಲಿ ಲಕ್ನೊ ಮ್ಯಾಜಿಸ್ಟ್ರೇಟ್ 48 ಆರೋಪಿಗಳ ವಿರುದ್ಧ ಆರೋಪ ದಾಖಲಿಸುವಂತೆ (ಅಪರಾಧ ಸಂಚು ಒಳಗೊಂಡಂತೆ) ಆದೇಶಿಸಿತ್ತು ಆದರೆ ಅವರಲ್ಲಿ 34 ಮಂದಿ ಆದೇಶವನ್ನು ಪರಿಶೀಲಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್  ತಡೆಯಾಜ್ನೆಯನ್ನು ನೀಡಿತ್ತು.

ವಿಳಂಬ:

ಹೈಕೋರ್ಟ್ ನೀಡಿದ ತಡೆಯಾಜ್ನೆಯ ಕಾರಣದಿಂದ ನಾಲ್ಕು ವರ್ಷಗಳ ಕಾಲ ವಿಚಾರಣೆಯಲ್ಲಿ ಯಾವುದೇ ಪ್ರಗತಿಯಾಗಲಿಲ್ಲ.

ನಂತರ 2001ರ ಫೆಬ್ರವರಿ 12ರಂದು ಅಲಹಾಬಾದ್ ಹೈ ಕೋರ್ಟ್, ಸಿಬಿಐ ಪ್ರಕರಣ ದುರ್ಬಲವಾಗಿರುವುದರಿಂದ ಅಡ್ವಾಣಿ, ಜೋಶಿ, ಭಾರ್ತಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ವಿರುದ್ಧ ಅಪರಾಧ ಸಂಚು ಆರೋಪದ ದೂರು ಕೈ ಬಿಡುವಂತೆ ಆದೇಶಿಸಿತ್ತು.

ಸುಮಾರು ಮೂರು  ತಿಂಗಳ ಬಳಿಕ ಲಕ್ನು ವಿಶೇಷ ನ್ಯಾಯಾಲಯ ಮೇ 4ರಂದು ಎಫ್.ಐ.ಆರ್  ಸಂಖ್ಯೆ 197 ಮತ್ತು 198ಗಳನ್ನು ಮತ್ತೆ ವಿಭಜನೆ ಮಾಡಿದ್ದು, 21 ಆರೋಪಿಗಳ ವಿಚಾರಣೆಯನ್ನು ರಾಯ್ ಬರೇಲಿ ಮತ್ತು ಇತರ 27 ಮಂದಿಯನ್ನುಲಕ್ನೊದಲ್ಲಿ ವಿಚಾರಣೆ ನಡೆಸಲಾಗುವುದೆಂದು ಹೇಳಿತು.

ಸಿಬಿಐ ನಂತರ ಅಪರಾಧ ಸಂಚು ಆರೋಪವನ್ನು ಕೈಬಿಡುವ ತನ್ನ ನಿರ್ಣಯವನ್ನು ಮರುಪರಿಶೀಲಿಸುವಂತೆ ಕೋರಿ ಹೈಕೋರ್ಟ್ ಗೆ ಹೋಯಿತು. ಆದರೆ ಅವರ ಅರ್ಜಿಯು ತಿರಸ್ಕರಿಸಲ್ಪಟ್ಟಿತು. ಜೂ.16ರಂದು ವಿಚಾರಣೆಯನ್ನು ಮುಂದುವರಿಸಲು ಹೊಸ ಸೂಚನೆ ಹೊರಡಿಸುವಂತೆ ಸಿಬಿಐ ಯುಪಿ ಸರಕಾರವನ್ನು ಕೇಳಿಕೊಳ್ಳುತ್ತದೆ.

2003ರಲ್ಲಿ ಸಿಬಿಐ ಅಡ್ವಾಣಿ ವಿರುದ್ದದ ಅಪರಾದಿ ಸಂಚನ್ನು ಹಿಂಪಡೆಯುತ್ತದೆ ಮತ್ತು ರಾಯ್ ಬರೇಲಿ ಕೋರ್ಟ್ ನಲ್ಲಿ ಹೊಸ ಚಾರ್ಜ್ ಶೀಟನ್ನು ಸಲ್ಲಿಸುತ್ತದೆ. ಆದರೆ 2005ರ ಜುಲೈಯಲ್ಲಿ ಹೈಕೋರ್ಟ್ ದ್ವೇಷವನ್ನು ಪ್ರಚೋದಿಸಿದ ಆರೋಪವನ್ನು ಅಡ್ವಾಣಿಯ ವಿರುದ್ದ ಮರುದಾಖಲಿಸುತ್ತದೆ.

2010ರ ತನಕ ಎರಡೂ ಪ್ರಕರಣಗಳನ್ನು ವಿಚಾರಣೆಯನ್ನು ಎರಡು ಪ್ರತ್ಯೇಕ ನ್ಯಾಯಾಲಯಗಳಲ್ಲಿ ನಡೆಸಲಾಗುತ್ತಿತ್ತು. 2011ರಲ್ಲಿ ಸಿಬಿಐ ಅಂತಿಮವಾಗಿ ಸುಪ್ರೀಂ ಕೋರ್ಟ್ ಮುಂದೆ ಹೋಗಲು ನಿರ್ಧರಿಸುತ್ತದೆ. ರಾಯ್ ಬರೇಲಿಯ ವಿಚಾರಣೆಯನ್ನು ಲಕ್ನೊಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಿರ್ಧರಿಸುತ್ತದೆ.  

ಮುಂದಿನ 7 ವರ್ಷಗಳವರೆಗೆ ಹಲವು ಪರಿಶೀಲನಾ ಅರ್ಜಿಗಳು ಕೋರ್ಟ್ ಗಳಲ್ಲಿ ಸಲ್ಲಿಕೆಯಾಗಿದ್ದು. ವಿಚಾರಣೆ ಇನ್ನಷ್ಟು ವಿಳಂಬಗೊಳ್ಳಲು ಕಾರಣವಾಗುತ್ತದೆ. 19 ಎಪ್ರಿಲ್ 2017ರಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಅಡ್ವಾಣಿ ಮತ್ತು ಇತರರನ್ನು ಅಪರಾಧ ಸಂಚು ಪ್ರಕರಣದಲ್ಲಿ ಮರುಸೇರಿಸಿತ್ತು.

ಪರಮೋಚ್ಛ ನ್ಯಾಯಾಲಯವು ಹೈಕೋರ್ಟ್ ಆದೇಶವನ್ನು “ತಪ್ಪು” ಎಂಬುದಾಗಿ ಕರೆಯಿತು.

“ತಾಂತ್ರಿಕವಾಗಿ ವಿಚಾರಣೆಯು 2010ರ ನಂತರವಷ್ಟೆ ಆರಂಭಗೊಂಡಿತ್ತು. ಅದಕ್ಕೆ ಮುಂಚೆ ಆರೋಪವನ್ನು ದಾಖಲಿಸುವ ಘಟ್ಟದಲ್ಲೇ ಉಳಿದಿತ್ತು. ಏಕೆಂದರೆ ಹೆಚ್ಚಿನ ಆರೋಪಿಗಳು ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸುತ್ತಿದ್ದರು” ಎಂಬುದಾಗಿ ಸಿಬಿಐ ವಕೀಲ ಲಲಿತ್ ಸಿಂಗ್ ‘ದಿ ಪ್ರಿಂಟ್’ ಗೆ ತಿಳಿಸಿದ್ದಾರೆ.

ಸಾಕ್ಷ್ಯ

ಧ್ವಂಸಕ್ಕೆ ಸುಮಾರು 30000-40000 ಸಾಕ್ಷ್ಯಗಳಿದ್ದಾರೆ. ವಿಚಾರಣೆಯಲ್ಲಿ ಮೌಖಿಕ ಸಾಕ್ಷ್ಯವು ಪ್ರಮುಖ ಪಾತ್ರ ವಹಿಸಲಿದೆ ಎಂಬುದಾಗಿ ಹೇಳಲಾಗುತ್ತದೆ. ತನಿಖೆಯ ವೇಳೆ ಸಾಕ್ಷಿಗಳು ಪೊಲೀಸರಿಗೆ ನೀಡಿದ ಎಲ್ಲಾ ಹೇಳಿಕೆಗಳೂ ಮೌಖಿಕ ಪುರಾವೆಯಲ್ಲಿ ಒಳಗೊಳ್ಳುತ್ತದೆ.

ತನಿಖೆಯ ವೇಳೆ ಸಿಬಿಐ 1026 ಸಾಕ್ಷಿಗಳನ್ನು ಸೇರಿಸಿವೆ. ಅವರಲ್ಲಿ ಹೆಚ್ಚಿನವರು ಪತ್ರಕರ್ತರು ಮತ್ತು ಪೊಲೀಸರಾಗಿದ್ದಾರೆ. ಎಂಟು ಮಂದಿ ಬಿಜೆಪಿ ಮತ್ತು ವಿ.ಎಚ್.ಪಿ ನಾಯಕರ ವಿರುದ್ಧ ಅಪರಾಧ ಸಂಚು ಪ್ರಕರಣವನ್ನು ಸಾಬೀತುಪಡಿಸಲು ಸಿಬಿಐ ಈಗ ಮೌಖಿಕ ಸಾಕ್ಷ್ಯಗಳನ್ನು ಆಧರಿಸಿಕೊಳ್ಳಲಿದೆ.

ಸಾಕ್ಷಿಗಳನ್ನು ಪತ್ತೆಹಚ್ಚುವುದಕ್ಕಾಗಿ ಸಿ.ಬಿ.ಐ ಹೆಚ್ಚುವರಿ ಪ್ರಯತ್ನಗಳನ್ನು ಮಾಡಿದೆ. 2010ರಿಂದ ಹಲವು ಸಿಬಿಐ ತಂಡಗಳು ದೇಶದ ಉದ್ದಗಲಕ್ಕೂ ಪ್ರಯಾಣಿಸಿ ಹಲವರಿಗೆ ಕೋರ್ಟ್ ಮುಂದೆ ಹಾಜರಾಗುವಂತೆ ಸಮನ್ಸ್ ಗಳನ್ನು ಬಿಡುಗಡೆಗೊಳಿಸಿದೆ. ಕೆಲವರನ್ನು ಇಂಗ್ಲೆಂಡ್ ಮತ್ತು ಮಯಾನ್ಮಾರ್ ಗಳಲ್ಲಿ ಪತ್ತೆಹಚ್ಚಲಾಗಿತ್ತು.

ಇದುವರೆಗೆ ಸಾವಿರ ಮಂದಿಯಲ್ಲಿ 351 ಮಂದಿ ಸಾಕ್ಷಿಗಳು ಹೇಳಿಕೆಗಳನ್ನು ನೀಡಲು ಕೋರ್ಟ್ ಮುಂದೆ ಹಾಜರಾಗಿದ್ದಾರೆ.

1990ರಲ್ಲಿ ರಾಮಜನ್ಮಭೂಮಿಗಾಗಿ ರಥಯಾತ್ರೆ ನಡೆಸುವ ವೇಳೆ ಅಡ್ವಾಣಿಯಂತಹ ನಾಯಕರು ಮಾಡಿದ ಭಾಷಣಗಳನ್ನು ಕೂಡ ಮೌಖಿಕ ಸಾಕ್ಷ್ಯದಲ್ಲಿ ಸೇರಿಸಲಾಗಿದೆ.

1992ರ ಡಿಸೆಂಬರ್ 6ರಂದು ಮಾಧ್ಯಮಗಳಲ್ಲಿ ಪ್ರಕಟವಾದ ಫೋಟೊ, ವೀಡಿಯೊ ಒಳಗೊಂಡಂತೆ ಮಾಧ್ಯಮ ವರದಿಗಳನ್ನು ಸಾಕ್ಷ್ಯ ದಾಖಲೆಗಳಾಗಿ ಸೇರಿಸಲಾಗಿದೆ.

100ಕ್ಕೂ ಹೆಚ್ಚು ಯು ಮ್ಯಾಟಿಕ್ ವೀಡಿಯೊ ಕ್ಯಾಸೆಟ್ ಗಳನ್ನು ಸಲ್ಲಿಸಲಾಗಿದ್ದು, ಕೋರ್ಟ್ ನಲ್ಲಿ 27 ಇಂಚು ಸೋನಿ ಟಿ.ವಿ ಮತ್ತು ಎರಡು ವಿ.ಸಿ.ಆರ್ ಗಳನ್ನು ಬಳಸಿ ಪ್ರದರ್ಶಿಸಲಾಗಿತ್ತು.

ನಿರೀಕ್ಷೆಯೇನು?

2019ರ ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ಹಿಂದೂ ಒಡೆತನ ಹಕ್ಕುದಾರರಿಗೆ ವಿವಾದಿತ ಸ್ಥಳದ ಒಡೆತನ ಹಕ್ಕನ್ನು ನೀಡುವಾಗ ‘ಧ್ವಂಸವು ಕಾನೂನಿನ ‘ಅತಿಯಾದ ಉಲ್ಲಂಘನೆ’ ಎಂಬುದಾಗಿ ಹೇಳಿತ್ತು.

ಮಾಡಲಾದ ಅಪರಾಧಕ್ಕೆ ಪರಿಹಾರಿ ಒದಗಿಸಬೇಕು. ಸಂವಿಧಾನದ 142ನೆ ಅನುಬಂಧದಲ್ಲಿ ಇರುವ ತನ್ನ ಅಧಿಕಾರವನ್ನು ಉಪಯೋಗಿಸಿಕೊಂಡು ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸುವುದಕ್ಕಾಗಿ ಕೇಂದ್ರ ಅಥವಾ ಉತ್ತರ ಪ್ರದೇಶ ಸರಕಾರ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಗೆ 5 ಎಕರೆ ಭೂಮಿ ನೀಡಬೇಕೆಂದು ಆದೇಶಿಸಿತ್ತು.

ಧ್ವಂಸ ಕೃತ್ಯವು ಕಾನೂನಿನ ‘ಉಲ್ಲಂಘನೆ’ ಎಂಬ ಸುಪ್ರೀಂ ಕೋರ್ಟ್ ವೀಕ್ಷಣೆಯು ತೀರ್ಪಿನ ಮೇಲೆ ಪ್ರಭಾವ ಬೀರಲಿದೆಯೇ ಎಂದು ಕಾದು ನೋಡಬೇಕಿದೆ.

ಧ್ವಂಸವು ಉಲ್ಲಂಘನೆಯ ಕೃತ್ಯವಾಗಿರುವುದರಿಂದ ಅದರ ಸಂಚು ರೂಪಿಸಿದವರು ಶಿಕ್ಷಿಸಲ್ಪಡಬೇಕು ಎಂದು ಪ್ರಾಸಿಕ್ಯೂಶನ್ ತನ್ನ ಅಂತಿಮ ವಾದದಲ್ಲಿ ಹೇಳಿದೆ. ಅದೇವೇಳೆ, ಪ್ರತಿವಾದಿ ವಕೀಲರು ಭೂಮಿ ‘ಹಿಂದೂ ಹಕ್ಕುದಾರ’ರಿಗೆ ಸೇರುತ್ತದೆಂಬ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪನ್ನು ಉಲ್ಲೇಖಿಸಿದ್ದಾರೆ.



Join Whatsapp